ಕೋಲ್ಕತ್ತಾ: ಭಾರತೀಯ ಜನತಾ ಪಾರ್ಟಿ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಇಂದು ಪಶ್ಚಿಮ ಬಂಗಾಳದ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಖಚಿತ ಎಂದಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ತೇಜಸ್ವಿ ಸೂರ್ಯ, ಪಶ್ಚಿಮ ಬಂಗಾಳದಲ್ಲಿ ನಾವೂ ಸರ್ಕಾರ ರಚನೆ ಮಾಡಲಿದ್ದು, ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಲಿದ್ದೇವೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ಮುಂದಿನ ದಿನಗಳಲ್ಲಿ ಸೋನಾರ್ ಬಂಗಾಳ್ ಆಗುವುದರಲ್ಲಿ ಸಂದೇಹವಿಲ್ಲ ಎಂದರು. ಇದೇ ವೇಳೆ, ದೆಹಲಿಯಲ್ಲಿ ನಡೆದಿರುವ ಸ್ಫೋಟದ ಬಗ್ಗೆ ಮಾತನಾಡಿರುವ ತೇಜಸ್ವಿ, ಸುಮಾರು 6 ವರ್ಷಗಳ ಬಳಿಕ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ. ಈಗಾಗಲೇ ತನಿಖಾ ಕಾರ್ಯ ನಡೆಯುತ್ತಿದ್ದು, ಆರೋಪಿಗಳಿಗೆ ಖಂಡಿತವಾಗಿ ಶಿಕ್ಷೆಯಾಗಲಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ತೃಣಮೂಲ ಕಾಂಗ್ರೆಸ್ನ ಕೆಲವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.