ಭುವನೇಶ್ವರ್, ಒಡಿಶಾ: ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಸುಭಾಷ್ ಪಾಣಿಗ್ರಹಿ ಹ್ಯಾಂಡ್ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಒಡಿಶಾದ ವಿಧಾನಸಭೆಯಲ್ಲಿ ನಡೆದಿದೆ.
ರೈತರ ಮಂಡಿಗಳನ್ನು ನಿರ್ವಹಿಸಲು ಸರ್ಕಾರದ ವಿಫಲತೆ, ಭತ್ತ ಸಂಗ್ರಹಣೆಯಲ್ಲಿ ಅವ್ಯವಸ್ಥೆ ಮತ್ತು ಟೋಕನ್ ವ್ಯವಸ್ಥೆ ಸರಿಯಾಗಿ ಜಾರಿಗೊಳ್ಳುತ್ತಿಲ್ಲ ಎಂದು ಆರೋಪಿಸಿ ದಿಯೋಗಢ ಶಾಸಕ ಸುಭಾಷ್ ಪಾಣಿಗ್ರಹಿ ಆರೋಪಿಸಿ, ಸ್ಯಾನಿಟೈಸರ್ ಸೇವಿಸಿದ್ದಾರೆ.
ಇದನ್ನೂ ಓದಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ ಸಿಎಂ
ಆಹಾರ ಸರಬರಾಜು ಸಚಿವ ರನೇಂದ್ರ ಸ್ವೇನ್ ರಾಜ್ಯದಲ್ಲಿ ಪಡಿತರ ಮತ್ತು ಇತರ ವ್ಯವಸ್ಥೆ ಬಗ್ಗೆ ವಿಧಾನಸಭೆಯಲ್ಲಿ ವಿವರಣೆ ನೀಡುತ್ತಿದ್ದಾಗ ಸುಭಾಷ್ ಪಾಣಿಗ್ರಹಿ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಸಂಸದೀಯ ವ್ಯವಹಾರಗಳ ಸಚಿವ ಬ್ರಿಕಮ್ ಅರುಖಾ ಮತ್ತು ಇತರ ಶಾಸಕರು ಪಾಣಿಗ್ರಹಿ ಅವರಿಂದ ಸ್ಯಾನಿಟೈಸರ್ ಕಸಿದುಕೊಂಡಿದ್ದಾರೆ.
ಇದಾದ ನಂತರ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಗದ್ದಲ ಹೆಚ್ಚಾಗಿದ್ದು, ವಿಧಾನಸಭಾ ಅಧಿವೇಶನವನ್ನು ಮುಂದೂಡಲಾಗಿದೆ. ಇದಕ್ಕೂ ಮೊದಲು ಪಾಣಿಗ್ರಹಿ ರೈತರಿಗಾಗಿ ನಾನು ಪ್ರಾಣ ನೀಡಲೂ ಸಿದ್ಧ ಎಂಬ ಹೇಳಿಕೆ ನೀಡಿದ್ದರು.