ಗಾಂಧಿನಗರ: ಗುಜರಾತ್ನಲ್ಲಿ ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲ ಸಾಧ್ಯತೆ ಖಚಿತವಾಗಿದೆ. 1995 ರಿಂದ ಚುನಾವಣೆಯಲ್ಲಿ ಸೋಲನುಭವಿಸದ ಭಾರತೀಯ ಜನತಾ ಪಕ್ಷ ಸದ್ಯದ ಟ್ರೆಂಡ್ ಪ್ರಕಾರ 182 ಕ್ಷೇತ್ರಗಳಲ್ಲಿ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ 149 ಸ್ಥಾನಗಳ ಸಾರ್ವಕಾಲಿಕ ದಾಖಲೆಯನ್ನು ಮೀರಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ಗೆದ್ದರೆ ಎಡರಂಗದ ದಾಖಲೆ ಸಮ: ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳ ಪೈಕಿ ಬಹುಮತಕ್ಕೆ 92 ಸ್ಥಾನದ ಅಗತ್ಯವಿದೆ. ಬಿಜೆಪಿ ಸದ್ಯಕ್ಕೆ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಕ್ಸಿಟ್ ಪೋಲ್‌ಗಳು ಸಹಿತ ಸತತ ಏಳನೇ ಅವಧಿಗೆ ಕೇಸರಿ ಪಡೆ ಆಯ್ಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಬಿಜೆಪಿ ಈ ಬಾರಿ ಗೆಲುವು ಸಾಧಿಸಿದ್ದೇ ಆದಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಸರ್ಕಾರದ 34 ವರ್ಷಗಳ ಆಡಳಿತವನ್ನು ಸರಿಗಟ್ಟಲಿದೆ. 27 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕೇಸರಿ ಪಡೆಗೆ ಈವರೆಗೂ ಇಂತಹ ಜನಾದೇಶ ಬಂದಿರಲಿಲ್ಲ.
ತನ್ನದೇ ದಾಖಲೆ ಪುಡಿ?: 2002 ರ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ ಬಿಜೆಪಿ 127 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಅದಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ತನ್ನದೇ ದಾಖಲೆಯನ್ನು ಬಿಜೆಪಿ ಪುಡಿಗಟ್ಟಲಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬಂದ ಮೇಲೆ ಕಾಂಗ್ರೆಸ್ ರಾಜ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ.
1985 ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪನೆ ಮಾಡಿತ್ತು. ಅದು ಐತಿಹಾಸಿಕ ಗೆಲುವಿನ ಮೂಲಕ. 182 ಸ್ಥಾನಗಳಲ್ಲಿ ಕಾಂಗ್ರೆಸ್ ದಾಖಲೆಯ 149 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶೇಕಡಾವಾರು ಮತದಾನ 55 ಕ್ಕಿಂತ ಹೆಚ್ಚಿತ್ತು. ಇದನ್ನು ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಮೀರಿಸಲು ಸಾಧ್ಯವಾಗಿಲ್ಲ. ಅದಾದ ಬಳಿಕ ಬಿಜೆಪಿ 1995 ರಿಂದ ಸತತವಾಗಿ ರಾಜ್ಯದಲ್ಲಿ ಗೆಲುವು ಸಾಧಿಸಿ ಭದ್ರಕೋಟೆ ಕಟ್ಟಿದೆ.
ಓದಿ: ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ ಯತ್ನ