ನವದೆಹಲಿ: ಬಿಜೆಪಿ ಪಕ್ಷದ ಕಚೇರಿಯಲ್ಲಿ ಭದ್ರತಾ ಕೆಲಸಗಳಿಗೆ 'ಅಗ್ನಿವೀರ್‌ಗಳಿಗೆ' ಆದ್ಯತೆ ನೀಡುವುದಾಗಿ ಬಿಜೆಪಿಯ ಸಂಸದ ಕೈಲಾಶ್ ವಿಜಯವರ್ಗಿಯಾ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆ ಎದುರಿಸುವಂತಾಗಿದೆ. ತಮ್ಮದೇ ಪಕ್ಷದ ವರುಣ್ ಗಾಂಧಿ ಸಹ ಈ ಕೇಳಿಕೆಗೆ ಕಿಡಿಕಾರಿದ್ದಾರೆ.
ಇಂದೋರ್‌ನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜಯವರ್ಗಿಯಾ, ನಾಲ್ಕು ವರ್ಷಗಳ ಗುತ್ತಿಗೆ ಮಿಲಿಟರಿ ನೇಮಕಾತಿ ಕುರಿತು ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿಕೊಂಡರು. ಅವರು ನಾಲ್ಕು ವರ್ಷಗಳ ಸೇವೆಯ ನಂತರ ಹಿಂತಿರುಗಿದಾಗ ಅವರ ಕೈಯಲ್ಲಿ 11 ಲಕ್ಷ ರೂ. ಮತ್ತು ಅವರು ತಮ್ಮ ಎದೆಯ ಮೇಲೆ ಅಗ್ನಿವೀರನ ಬ್ಯಾಡ್ಜ್ನೊಂದಿಗೆ ತಿರುಗಾಡುತ್ತಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಭದ್ರತೆಗಾಗಿ ನಾನು ಅಗ್ನಿವೀರ್‌ಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಟೀಕಿಸಿದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ.
ವಿಜಯವರ್ಗಿಯಾ ಅವರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ದೇಶದ ಯುವಕರು ದೇಶ ಸೇವೆ ಮಾಡಲು ಸೇನೆಗೆ ಸೇರುತ್ತಾರೆಯೇ ಹೊರತು, ಬಿಜೆಪಿ ಕಚೇರಿಯ ಹೊರಗೆ ಕಾವಲುಗಾರರಾಗಿ ಇರಲು ಬಯಸುವುದಿಲ್ಲ. ದೇಶದ ಯುವಕರು ಮತ್ತು ಸೇನಾ ಸಿಬ್ಬಂದಿಯನ್ನು ಈ ರೀತಿ ಅವಮಾನಿಸಬೇಡಿ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನಮ್ಮ ದೇಶದ ಯುವಕರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಗಲಿರುಳು ಶ್ರಮಿಸುತ್ತಾರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಏಕೆಂದರೆ ಅವರು ಸೈನ್ಯಕ್ಕೆ ಸೇರುವ ಮೂಲಕ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತಾರೆ ಎಂದಿದ್ದಾರೆ.
ಬಿಜೆಪಿ ಸಂಸದ ವರುಣ್ ಗಾಂಧಿ ಸಹ ವಿಜಯವರ್ಗಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಮಹಾ ಸೇನೆಯ ವೀರಗಾಥೆಗಳನ್ನು ಕೇವಲ ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇಡೀ ಜಗತ್ತಿನಲ್ಲಿ ಅದರ ಶೌರ್ಯ ಪ್ರತಿಧ್ವನಿಸುತ್ತದೆ. ಭಾರತೀಯ ಸೇನೆಯು ಭಾರತಕ್ಕೆ ಸೇವೆ ಸಲ್ಲಿಸುವ ಕ್ರಮವಾಗಿದೆ ಅದು ಕೇವಲ ಉದ್ಯೋಗವಲ್ಲ ಎಂದು ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ದಾರುಣ ಸಾವು, ಭೂಕುಸಿತಕ್ಕೆ ವ್ಯಕ್ತಿ ಬಲಿ