ಅಮೃತಸರ : ಪಂಜಾಬ್‌ನ ಅಮೃತಸರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಇಲ್ಲಿನ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಲ್ವಿಂದರ್ ಗಿಲ್ ಅವರನ್ನು ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈಯಲು ಯತ್ನಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಲ್ವಿಂದರ್ ಅವರನ್ನು ಮೊದಲು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರ ಸ್ಥಿತಿ ಗಂಭೀರವಾಗಿರುವುದನ್ನು ಅರಿತು ಅಮೃತಸರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಜುಗರಾಜ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, " ಭಾನುವಾರ ರಾತ್ರಿ ಬಲ್ವಿಂದರ್ ಗಿಲ್ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಬೈಕ್ನಲ್ಲಿ ಬಂದಿದ್ದು, ಓರ್ವ ಮನೆಯ ಹೊರಗೆ ನಿಂತು ಕಾಲಿಂಗ್ ಬೆಲ್ ಒತ್ತಿದ್ದಾನೆ. ಬಳಿಕ ಬಿಜೆಪಿ ಮುಖಂಡ ಬಲ್ವಿಂದರ್ ಗಿಲ್ ಬಾಗಿಲು ತೆರೆಯುತ್ತಿದ್ದಂತೆ ಯುವಕನೊಬ್ಬ ಆತನ ಮುಖಕ್ಕೆ ಗುಂಡು ಹಾರಿಸಿದ್ದಾನೆ. ಗುಂಡು ದವಡೆಯ ಮೂಲಕ ಹಾದು ಹೋಗಿದೆ. ಘಟನೆ ಬಳಿಕ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಗುಂಡಿನ ಸದ್ದು ಕೇಳಿ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ಜನರು ಸ್ಥಳಕ್ಕೆ ಆಗಮಿಸಿದ್ದಾರೆ".
ಇದನ್ನೂ ಓದಿ : ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹತ್ಯೆಯ ಭಯಾನಕ ವಿಡಿಯೋ: ಘಟನೆಯ ಇಂಚಿಂಚು ಮಾಹಿತಿ ಇಲ್ಲಿದೆ
ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತರ ಪುತ್ರಿ, " ಬಲ್ವಿಂದರ್ ಗಿಲ್ ಅವರು ಬಿಜೆಪಿ ಎಸ್‌ಸಿ ಮೋರ್ಚಾ ಪಂಜಾಬ್‌ನ ಉಪಾಧ್ಯಕ್ಷರಾಗಿದ್ದಾರೆ. ಅವರು ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಬಂದು ವಿಶ್ರಮಿಸುತ್ತಿದ್ದರು. ಈ ವೇಳೆ ಮುಖವನ್ನು ಮುಚ್ಚಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮನೆಗೆ ಬಂದು ನಿಮ್ಮ ತಂದೆ ಎಲ್ಲಿ ಎಂದು ನನ್ನನ್ನು ಕೇಳಿದರು. ಬಳಿಕ ನಾನು ತಂದೆಯನ್ನು ಕರೆದು ಯಾರೋ ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆ ಎಂದು ಹೇಳಿದೆ. ಅವರು ಬಂದ ತಕ್ಷಣ ಗುಂಡು ಹಾರಿಸಿದರು. ಅದು ಅವರ ದವಡೆಗೆ ತಗುಲಿತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು" ಎಂದಿದ್ದಾರೆ.
ಇದನ್ನೂ ಓದಿ : ಗ್ಯಾಂಗ್ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್ಗೆ ಗುಂಡಿಕ್ಕಿ ಹತ್ಯೆ
ಇನ್ನು ಮೊನ್ನೆಯಷ್ಟೇ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಗ್ಯಾಂಗ್ಸ್ಟರ್ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿದ್ದರು. ಅತೀಕ್ ಪುತ್ರ ಅಸದ್ನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆಯಾದ ಎರಡೇ ದಿನದಲ್ಲಿ ತಂದೆ ಮತ್ತು ಚಿಕ್ಕಪ್ಪನ ಕೊಲೆ ಮಾಡಲಾಗಿತ್ತು. ಅತೀಕ್ ಮತ್ತು ಅಶ್ರಫ್ ಇಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ಪೊಲೀಸರು ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿತ್ತು.
ಇದನ್ನೂ ಓದಿ : ಡಾನ್ ಅತೀಕ್ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್ಗಳಿಂದ ಹತ್ಯೆ