ಗುವಾಹಟಿ(ಅಸ್ಸೋಂ): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಮಹಾವಿಕಾಸ್ ಆಘಾಡಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಏಕನಾಥ್ ಶಿಂದೆ ಗುಂಪು ಗುವಾಹಟಿಯಲ್ಲಿ ಬೀಡು ಬಿಟ್ಟಿದೆ. ಇದರ ಲಾಭ ಪಡೆದುಕೊಳ್ಳಲು ಭಾರತೀಯ ಜನತಾ ಪಾರ್ಟಿ ಮುಂದಾಗಿದ್ದು, ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸಿದರು. ಒಂದು ವೇಳೆ ಮೈತ್ರಿ ಸರ್ಕಾರ ಪತನವಾದರೆ, ಮುಂದಿನ ಕ್ರಮದ ಬಗ್ಗೆ ಅವರು ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೀಗಿದೆ ಸರ್ಕಾರ ರಚನೆಯ ಲೆಕ್ಕಾಚಾರ: 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಹೊಂದಿದ್ದು, 2ನೇ ಅತಿದೊಡ್ಡ ಪಕ್ಷವಾಗಿದೆ. ಒಂದು ವೇಳೆ 48 ಬಂಡಾಯ ಶಾಸಕರು ತಮ್ಮ ಬೆಂಬಲವನ್ನು ಬಿಜೆಪಿಗೆ ನೀಡಿದರೆ, ಯಾವುದೇ ತೊಂದರೆ ಇಲ್ಲದೇ ಸರ್ಕಾರ ರಚನೆಯಾಗಲಿದೆ. ಮಹಾ ಸರ್ಕಾರ ರಚನೆಗೆ 145 ಶಾಸಕರ ಬೆಂಬಲ ಬೇಕಿದೆ.
ಸಚಿವ ಸಂಪುಟ ಕರೆದ ಉದ್ಧವ್ ಠಾಕ್ರೆ: ಸರ್ಕಾರದ ವಿರುದ್ಧ ಏಕನಾಥ್ ಶಿಂದೆ ಬಳಗ ಬಂಡಾಯದ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಕಾನೂನು ನಡೆ ಹಾಗೂ ಇತರೆ ವಿಚಾರಗಳ ಕುರಿತಾಗಿ ಚರ್ಚಿಸಲಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಬಿರುಕು ಉಂಟಾದಾಗಿನಿಂದಲೂ ಎರಡು ಸಲ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಕಾನೂನು ಹೋರಾಟ ಮುಂದುವರೆದಿರುವ ಕಾರಣ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮನವೊಲಿಕೆಯಿಂದ ತಮ್ಮ ನಿರ್ಧಾರವನ್ನು ಅವರು ಹಿಂಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿರುವ ಏಕನಾಥ್ ಶಿಂದೆ, "ನಮ್ಮ ವಕ್ತಾರರಾದ ದೀಪಕ್ ಕೇಸರ್ಕರ್ ಎಲ್ಲ ಮಾಹಿತಿ ನೀಡಲಿದ್ದು, ನಮ್ಮ ಮುಂದಿನ ನಿಲುವು ಹಾಗೂ ನಿರ್ಧಾರದ ಬಗ್ಗೆ ತಿಳಿಸುವರು. ನಾವು ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು ಮುಂದುವರೆಸಿಕೊಂಡು ಹೋಗುತ್ತೇವೆ" ಎಂದು ಸೂಚ್ಯವಾಗಿ ತಿಳಿಸಿದರು.
ಇದನ್ನೂ ಓದಿ: 50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ
ನಮ್ಮೊಂದಿಗಿರುವ ಎಲ್ಲ ಶಾಸಕರು ಸ್ವಇಚ್ಛೆಯಿಂದ ಗುವಾಹಟಿಗೆ ಆಗಮಿಸಿದ್ದಾರೆ. ಶೀಘ್ರದಲ್ಲೇ ನಾವು ಮುಂಬೈಗೆ ವಾಪಸ್ ಆಗಲಿದ್ದೇವೆ. ನಮ್ಮೊಂದಿಗಿರುವ ಯಾವುದೇ ಶಾಸಕರ ಮೇಲೆ ಒತ್ತಡ ಹಾಕಿಲ್ಲ ಎಂದರು. ಕಳೆದ ಕೆಲ ದಿನಗಳಿಂದ ಒಟ್ಟು 48 ಬಂಡಾಯ ಶಾಸಕರು ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ.