ನವದೆಹಲಿ: 22 ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಆರೋಪಕ್ಕೆ ಸಂಬಂಧಿಸಿದಂತೆ ಆಗ್ರಾ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿರುವುದರ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರ "ವಿಚಾರಣೆಯ ಅಣಕು ಡ್ರಿಲ್" ನಡೆಸಿದೆ ಎಂದು ಕುಟುಕಿದ್ದಾರೆ.
ಆಸ್ಪತ್ರೆಯು ಆಕ್ಸಿಜನ್ ಸರಬರಾಜಿನ ಅಣಕು ಡ್ರಿಲ್ ನಡೆಸುವ ವೇಳೆಗೆ ಆಕ್ಸಿಜನ್ ಕಡಿತಗೊಳಿಸಿದ ಪರಿಣಾಮ 22 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿಲಾಗಿದೆ. ಆದರೆ ಇದಕ್ಕೆ ಯಾವುದೇ ಪುರಾವೆ ಲಭ್ಯವಿಲ್ಲ.
"ಆಗ್ರಾದ ಆಸ್ಪತ್ರೆಯೊಂದು ರೋಗಿಗಳ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸುವ ಮೂಲಕ 'ಅಣಕು ಡ್ರಿಲ್' ನಡೆಸಿತು ಮತ್ತು ಬಿಜೆಪಿ ಸರ್ಕಾರವು ಕ್ಲೀನ್ ಚಿಟ್ ನೀಡುವ ಮೂಲಕ ಅಣಕು ವಿಚಾರಣೆ ನಡೆಸಿತು" ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
"ಸರ್ಕಾರ ಮತ್ತು ಆಸ್ಪತ್ರೆ ಇಬ್ಬರೂ ರೋಗಿಗಳ ಕುಟುಂಬ ಸದಸ್ಯರ ಮನವಿಯನ್ನು ಕಡೆಗಣಿಸುವ ಮೂಲಕ ನ್ಯಾಯದ ನಿರೀಕ್ಷೆಗಳನ್ನು ಹಾಳು ಮಾಡಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾಗ್ದಾಳಿ ನಡೆಸಿದ್ದಾರೆ.