ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿರುವ ರಾಜ್ಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಧ್ವಜಗಳು ಪತ್ತೆಯಾಗಿದ್ದು, ಇದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಾಜಿ ಕಾಂಗ್ರೆಸ್ ನಾಯಕ ಜೀಶನ್ ಹೈದರ್ ಎಂಬುವವರು ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಧ್ವಜಗಳು ಕಾಣಿಸಿಕೊಂಡಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಿಜೆಪಿ ಧ್ವಜಗಳು ಒಂದು ಕಡೆ ಇದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು ನಿಂತು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯಗಳು ಇವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೀಶನ್ ಹೈದರ್, ಕಾಂಗ್ರೆಸ್ ಕಚೇರಿಯಲ್ಲಿ ಬೇರೆ ಪಕ್ಷದ ಧ್ವಜಗಳ ಪತ್ತೆಯಾದರೂ ಕಚೇರಿಯ ಉಸ್ತುವಾರಿಗಳಿಗೆ ಆಘಾತವಾಗಲಿ ಅಥವಾ ಆಶ್ಚರ್ಯವಾಗಲಿ ಆಗಿಲ್ಲ ಎಂದು ತೋರುತ್ತದೆ. ಈ ಘಟನೆಯಿಂದ ಕಾಂಗ್ರೆಸ್ ಸ್ಥಿತಿಯನ್ನು ನಿರ್ಣಯಿಸಬಹುದು ಎಂದು ಹೇಳಿದ್ದಾರೆ.
ಇತ್ತ, ಕಾಂಗ್ರೆಸ್ ಕಚೇರಿ ಪದಾಧಿಕಾರಿಗಳು ಈ ಬಗ್ಗೆ ಯಾವುದೇ ಸೂಕ್ತವಾದ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಇದು ಕೆಲ ಅಪರಿಚಿತರ ಕಿಡಿಗೇಡಿತನ ಇರಬೇಕೆಂದು ಕಾಂಗ್ರೆಸ್ ಯುವ ಮುಖಂಡರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮೇಘಾಲಯ ಬಿಜೆಪಿ ಉಪಾಧ್ಯಕ್ಷನ 'ವೇಶ್ಯಾಗೃಹ'ದ ಮೇಲೆ ದಾಳಿ: 5 ಮಕ್ಕಳ ರಕ್ಷಣೆ, 73 ಮಂದಿ ಬಂಧನ