ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮತ್ತು ಗೆಲುವಿನ ಕಾರ್ಯತಂತ್ರ ರೂಪಿಸುವಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿದೆ. ಬುಧವಾರ ಪ್ರತಿಪಕ್ಷಗಳು ಸಭೆ ಸೇರಿ ಸರ್ವ ಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಇದೀಗ ಈ ಸಭೆಯಿಂದ ದೂರ ಉಳಿದ ಎನ್‌ಡಿಎಯೇತರ ಪಕ್ಷಗಳ ಮೇಲೆ ಆಡಳಿತಾರೂಢ ಬಿಜೆಪಿ ಚಿತ್ತ ಹರಿಸಿದೆ.
ರಾಷ್ಟ್ರಪತಿ ಚುನಾವಣೆ ಸಂಬಂಧ ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ಪ್ರತಿಪಕ್ಷಗಳ ನಾಯಕರ ಸಭೆ ನಡೆಸಿದ್ದರು. ಆದರೆ, ಈ ಸಭೆಯಿಂದ ಪ್ರಮುಖ ಪಕ್ಷಗಳಾದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ), ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಆಪ್), ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪಂಜಾಬ್ನ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷಗಳು ಹೊರಗುಳಿದಿದ್ದವು.
ಈ ಚುನಾವಣೆಗೆ ಸುಮಾರು 10.86 ಲಕ್ಷ ಮತಗಳು ಇದ್ದು, ಬಿಜೆಪಿ ಮತ್ತು ಅದರ ಎನ್‌ಡಿಎ ಮೈತ್ರಿಕೂಟದ ಬಳಿ ನೂತನ ರಾಷ್ಟ್ರಪತಿ ಆಯ್ಕೆಗೆ ಬೇಕಾದ ಅರ್ಧದಷ್ಟು ಮತಗಳಿಂತ ಸ್ವಲ್ವ ಕಡಿಮೆ ಮತಗಳು ಇವೆ. ಆದ್ದರಿಂದ ಪ್ರತಿಪಕ್ಷಗಳ ಸಭೆಗೆ ಗೈರಾದ ರಾಜಕೀಯ ಪಕ್ಷಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅಲ್ಲದೇ, ಈಗಾಗಲೇ ಪಟ್ನಾಯಕ್ ಅವರ ಬಿಜೆಡಿ ಮತ್ತು ಜಗನ್ ಅವರ ವೈಎಸ್‌ಆರ್ ಕಾಂಗ್ರೆಸ್ ಬೆಂಬಲವನ್ನು ಪಡೆಯುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಇದರ ಭಾಗವಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಮೈತ್ರಿಕೂಟದ ಪಕ್ಷಗಳೊಂದಿಗೆ ವಿರೋಧ ಪಕ್ಷಗಳನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಲು ಆರಂಭಿಸಿದ್ದಾರೆ. ಜೊತೆಗೆ ಬಿಜೆಪಿಯಿಂದ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಮಾಡಲು ಸಂಭವನೀಯ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಮೂಲಗಳ ತಿಳಿಸಿವೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಎನ್‌ಡಿಎ, ಪ್ರತಿಪಕ್ಷಗಳ ಇನ್ನಿಲ್ಲದ ಯತ್ನ