ಕೋಲ್ಕತ್ತಾ: ಟಿಎಂಸಿಯಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಬಿಜೆಪಿ ಕಾರ್ಯಕರ್ತರೊಬ್ಬರ 85 ವರ್ಷದ ತಾಯಿ ಶೋವಾ ಮಜುಂದಾರ್ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ನಿಯೋಗ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದೆ.
ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ ಶೋವಾ ಮಜುಂದಾರ್ ಸಾವು ನಮಗೆ ತೀವ್ರ ನೋವನ್ನುಂಟು ಮಾಡಿದೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ, ಆದರೆ, ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಶೋವಾ ಸಾವಿಗೆ ಒಂದೇ ಒಂದು ಸಾಂತ್ವನದ ಮಾತನ್ನೂ ಹೇಳಿಲ್ಲ. ರಾಜ್ಯದ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದಕ್ಕೆ ಶೋವಾ ಸಾವು ಒಂದು ನಿದರ್ಶನ ಹೀಗಾಗಿ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿನಮ್ರವಾಗಿ ವಿನಂತಿಸುತ್ತೇವೆ. ಮತ್ತು ಪ್ರಕರಣದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲು ಈ ಕೇಸ್ ಅನ್ನು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ವಹಿಸಿ ವಿಚಾರಣೆ ನಡೆಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ದುಂಡುಮ್ ಪ್ರದೇಶದ ನಿಮ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಮನೆಗೆ ನುಗ್ಗಿದ್ದ ಟಿಎಂಸಿ ಕಾರ್ಯಕರ್ತರು, ಗೋಪಾಲ್ ಹಾಗೂ ಅವರ ಅಸ್ವಸ್ಥ ತಾಯಿ ಶೋವಾ ಮಜುಂದಾರ್ (85 )ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಶೋವಾ ಸೋಮವಾರ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರೆನ್ನಲಾದ ಬಿಜೆಪಿ ಕಾರ್ಯಕರ್ತನ ತಾಯಿ ಸಾವು..