ಸೆಪಹಿಜಾಲ(ತ್ರಿಪುರಾ): ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಸಿಬಿಐ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿ, ಸುಮಾರು 12 ಮಂದಿ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಸೆಪಹಿಜಾಲ ಜಿಲ್ಲೆಯ ಧನಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಕೆಲವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದಾರೆ.
ಬಿಜೆಪಿ-ಐಪಿಎಫ್‌ಟಿ (IPFT- Indigenous People's Front of Tripura) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಪ್ರಮುಖ ಸಂಘರ್ಷ ಎಂದು ಮೂಲಗಳು ತಿಳಿಸಿವೆ. ಅತಿ ಹೆಚ್ಚು ಬಾರಿ ತ್ರಿಪುರಾದ ಸಿಎಂ ಆಗಿದ್ದ ಮಾಣಿಕ್ ಸರ್ಕಾರ್ ಅವರು ಈಗ ಪ್ರತಿಪಕ್ಷ ನಾಯಕರಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಧನಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಧನಪುರಕ್ಕೆ ತೆರಳುವ ವೇಳೆ ಅಲ್ಲಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಬಾಷ್‌ಪುಕೂರ್ ಪ್ರದೇಶದಲ್ಲೇ ಮಾಣಿಕ್ ಸರ್ಕಾರ್ ಅವರನ್ನು ತಡೆಯಲಾಯಿತು. ಮಾಣಿಕ್ ಸರ್ಕಾರ್ ಸ್ವತಃ ತಮ್ಮ ಕ್ಷೇತ್ರವಾದ ಧನಪುರಕ್ಕೆ ತೆರಳಲು ಬಿಜೆಪಿ ಕಾರ್ಯಕರ್ತರು ಬಿಡಲಿಲ್ಲ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಮಾಣಿಕ್ ಸರ್ಕಾರ್ ಧನಪುರಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರು.
ಸುಮಾರು 6 ಕಿಲೋಮೀಟರ್ ದೂರದಿಂದ ಧನಪುರಕ್ಕೆ ಮಾಣಿಕ್ ಸರ್ಕಾರ್ ಮತ್ತು ಸಿಪಿಐಎಂ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಮಾಣಿಕ್ ಸರ್ಕಾರ್ ಸುತ್ತಲೂ ಸಿಪಿಎಂ ಕಾರ್ಯಕರ್ತರು ಸುತ್ತುವರೆದ ರಕ್ಷಣೆ ಒದಗಿಸಿದರು. ಇದೇ ವೇಳೆ, ಬಿಜೆಪಿ ಕಾರ್ಯಕರ್ತರ ಮೇಲೆ ಸಿಪಿಐಎಂ ಕಾರ್ಯಕರ್ತರು ಮೇಲೆ ದಾಳಿ ಮಾಡಿದ್ದು, ಎರಡೂ ಗುಂಪುಗಳ ನಡುವೆ ಭಾರಿ ಸಂಘರ್ಷ ನಡೆದಿದೆ.
ಹಲವು ಮನೆಗಳು, ಬೈಕ್ಗಳನ್ನು ಸಿಪಿಎಂ ಕಾರ್ಯಕರ್ತರು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. 12 ಮಂದಿ ಬಿಜೆಪಿ ಕಾರ್ಯಕರ್ತರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಘರ್ಷದ ನಂತರ ಧನಪುರಕ್ಕೆ ಆಗಮಿಸಿದ ಮಾಣಿಕ್ ಸರ್ಕಾರ್ ಭಾಷಣ ಮಾಡಿದ್ದು, ಸಿಪಿಎಂ ಕಾರ್ಯಕರ್ತರು ತಮಗೆ ರಕ್ಷಣೆ ನೀಡಿದ ಪರಿಯನ್ನು ಕೊಂಡಾಡಿದ್ದಾರೆ. ಕಾರ್ಯಕರ್ತರನ್ನು ಈ ಘಟನೆಯ ನಾಯಕ ಮತ್ತು ನಾಯಕಿಯರೆಂದು ಬಣ್ಣಿಸಿದ್ದಾರೆ.
ಈಗ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಇದನ್ನೂ ಓದಿ: ಪಾಕ್ ಐಎಸ್ಐ ಮುಖ್ಯಸ್ಥನಿಂದ ಮುಲ್ಲಾ ಬರದಾರ್ ಭೇಟಿ: ದೃಢಪಡಿಸಿದ ತಾಲಿಬಾನ್