ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಜಂಗಿ ಕುಸ್ತಿಗೆ ಸಾಕ್ಷಿಯಾಗಿದೆ. ಇದೀಗ ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿಶ್ವದ ಅತೀದೊಡ್ಡ ಸುಲಿಗೆ ಪಕ್ಷ ಅದನ್ನು ಎಂದಿಗೂ ನಾವು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಇಲ್ಲಿನ ಹಲ್ದಿಯಾ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿರುವ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷವು ಗಲಭೆಗಳನ್ನು ಆಯೋಜಿಸುತ್ತಿದೆ, ಜನರನ್ನು ಕೊಲ್ಲುತ್ತಿದೆ ಮತ್ತು ದಲಿತರನ್ನು ಹಿಂಸಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಬಿಜೆಪಿ ವಿಶ್ವದ ದೊಡ್ಡ ಸುಲಿಗೆ ಪಕ್ಷ, ನೀವು ಪಿಎಂ ಕೇರ್ ಫಂಡ್ ಏನಾಗಿದೆ ನೋಡಿ. ಗಲಭೆ ಮುಕ್ತ ಸಮಾಜ ನಿರೀಕ್ಷಿಸುತ್ತೀರಿ ಎಂದಾದರೆ ಅದಕ್ಕೆ ತೃಣಮೂಲ ಕಾಂಗ್ರೆಸ್ ಪಕ್ಷ ಒಂದೇ ದಾರಿಯಾಗಿದೆ ಎಂದು ಬಂಗಾಳ ಜನತೆಗೆ ಕರೆ ನೀಡಿದ್ದಾರೆ.
ಗಲಭೆ ಮಾಡಿ ಜನರನ್ನು ಕೊಲ್ಲುತ್ತಿರುವ ಪಕ್ಷಕ್ಕೆ ನಾವೆಂದಿಗೂ ಅಧಿಕಾರ ಹಿಡಿಯಲು ಬಿಡುವುದಿಲ್ಲ. ಬಿಜೆಪಿಯಲ್ಲಿನ ಮಹಿಳೆಯರಿಗೆ ರಕ್ಷಣೆ ಇಲ್ಲವೆಂದು ದೀದಿ ಆರೋಪಿಸಿದ್ದಾರೆ. ಬಿಜೆಪಿ ಸಂವಿಧಾನದ ರೂಪದಲ್ಲಿ ಚುನಾವಣೆ ಎದುರಿಸುತ್ತಿಲ್ಲ. ಬೆದರಿಕೆವೊಡ್ಡುವ ಮೂಲಕ ಚುನಾವಣಾ ಕಣಕ್ಕಿಳಿದಿದೆ. ಪ್ರಧಾನಿ ಎಲ್ಲವನ್ನೂ ಮಾರಾಟ ಮಾಡಿದ್ದಾರೆ. ಅವರು ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ. ಸರ್ಕಾರ ಈಗಾಗಲೇ ರೈಲ್ವೆ, ಕಲ್ಲಿದ್ದಲು ವಲಯ, ಬಿಎಸ್ಎನ್ಎಲ್, ವಿಮಾ ವಲಯ ಮತ್ತು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂದುವರೆದು, ಚುನಾವಣೆಗೂ ಮುನ್ನಾ ಕನಿಷ್ಠ 30 ಬಾರಿಯಾದರೂ ಇವಿಎಂ ಯಂತ್ರವನ್ನು ಪರೀಕ್ಷೆಗೊಳಪಡಿಸಿ ಯಾವುದೇ ಸಮಸ್ಯೆಯಿಲ್ಲ ಎಂಬುದು ಖಚಿತಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 100ರಷ್ಟು ಮತದಾನಕ್ಕಾಗಿ ವಿಶೇಷ ಅಭಿಯಾನ.. ಸ್ಕೇಟಿಂಗ್ ರೋಲರ್ ಧರಿಸಿ ಆಟೋ ಎಳೆದ ಬಾಲಕಿ!