ಚೆನ್ನೈ: ಜಸ್ಟ್ ಒಂದು ಬಿರಿಯಾನಿಗಾಗಿ ನಡೆದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾದ ದಾರುಣ ಘಟನೆ ಜರುಗಿದೆ. ಬಿರಿಯಾನಿ ವಿಚಾರದಲ್ಲಿ ದಂಪತಿಯ ಮಧ್ಯೆ ಜಗಳವಾಗಿದ್ದು, ಗಂಡ ಹೆಂಡತಿ ಇಬ್ಬರೂ ಬೆಂಕಿಗೆ ಬಲಿಯಾಗಿರುವ ಘಟನೆ ಇಲ್ಲಿ ನಡೆದಿದೆ.
ಘಟನೆಯ ವಿವರ: ದಂಪತಿಯಾದ ಕರುಣಾಕರನ್ (75) ಮತ್ತು ಪದ್ಮಾವತಿ (66) ಇಬ್ಬರೂ ಚೆನ್ನೈ ನಿವಾಸಿಗಳು. ಚೆನ್ನೈನ ಐನಾವರಂ ನಲ್ಲಿ ವಾಸಿಸುವ ಇವರಿಗೆ ನಾಲ್ಕು ಮಕ್ಕಳು. ಎಲ್ಲ ಮಕ್ಕಳ ಮದುವೆಯಾಗಿದ್ದು, ಎಲ್ಲರೂ ಬೇರೆಯಾಗಿದ್ದಾರೆ. ಕರುಣಾಕರನ್ ಮತ್ತು ಪದ್ಮಾವತಿ ಪ್ರತ್ಯೇಕವಾಗಿ ವಾಸಿಸುತ್ತಾರೆ. ವಯಸ್ಸಾದ ಕಾರಣದಿಂದ ಇಬ್ಬರಿಗೂ ಮಾನಸಿಕ ಕಾಯಿಲೆ ಆವರಿಸಿತ್ತು. ಕೆಲವೊಮ್ಮೆ ಮಕ್ಕಳ ಮನೆಯಲ್ಲಿ ಇರಲು ಹೋದರೂ ಅಲ್ಲೂ ಜಗಳವಾಡಿಕೊಂಡು ವಾಪಸ್ ಬರುತ್ತಿದ್ದರು. ಪ್ರತಿಯೊಂದು ವಿಷಯಕ್ಕೂ ಜಗಳವಾಡುವುದು ಇಬ್ಬರಿಗೂ ರೂಢಿಯಾಗಿತ್ತು.
ಹೀಗಿರುವಾಗ ಕರುಣಾಕರನ್ ತನ್ನ ಪತ್ನಿ ಪದ್ಮಾವತಿಗೆ ಸರಿಯಾಗಿ ಊಟ ಕೊಡಿಸಲಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ನವೆಂಬರ್ 7ರಂದು ಕರುಣಾಕರನ್ ಬಿರಿಯಾನಿ ಖರೀದಿಸಿ ಒಬ್ಬರೇ ತಿಂದಿದ್ದರು. ಆಗ ಪದ್ಮಾವತಿ ತನಗೂ ಬಿರಿಯಾನಿ ಬೇಕೆಂದಿದ್ದರು. ಇದರಿಂದಾಗಿ ಪತಿ ಪತ್ನಿಯ ನಡುವೆ ಜಗಳವಾಗಿದೆ. ಕುಪಿತಗೊಂಡ ಪತಿ ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ಪದ್ಮಾವತಿ ಬೆಂಕಿಯೊಂದಿಗೆ ಓಡಿ ಬಂದು ತನ್ನ ಗಂಡನನ್ನು ತಬ್ಬಿಕೊಂಡಿದ್ದಾಳೆ. ಆಗ ಬೆಂಕಿಯಲ್ಲಿ ಇಬ್ಬರೂ ಸುಟ್ಟು ಕರಕಲಾಗಿದ್ದಾರೆ.
ನಂತರ ಹೊಗೆ ಕಂಡ ನೆರೆಹೊರೆಯವರು ಧಾವಿಸಿ ಬಂದಿದ್ದಾರೆ. ನೀರು ಸುರಿದು ಬೆಂಕಿ ನಂದಿಸಿದ್ದಾರೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಅಯನವರಂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಶೇ 50 ರಷ್ಟು ಸುಟ್ಟಗಾಯವಾಗಿದ್ದ ದಂಪತಿಗಳನ್ನು ರಕ್ಷಿಸಿ ಆ್ಯಂಬುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಕಿಲಪಾಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಐನಾವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಆದಿವಾಸಿಗಳ ಬಂಬೂ ಬಿರಿಯಾನಿ: ತಯಾರಿಯ ವಿಧಾನ ಇಲ್ಲಿದೆ ನೋಡಿ