ಮಹಾರಾಷ್ಟ್ರ/ನಾಗ್ಪುರ: ನಾಗ್ಪುರ ಜಿಲ್ಲೆಯ ಉಮ್ರೇದ್ ತಾಲೂಕು ಮಂಗಳ್ವಾರ್ ಪೇಟೆಯ ಮನೆಯೊಂದರಲ್ಲಿ ವಿಶಿಷ್ಟ ಎಂಬಂತೆ ಹುಂಜದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.
ಈ ಹುಂಜವನ್ನು ಉಮಾಕಾಂತ್ ಎಂಬುವರ ಕುಟುಂಬ 1 ವರ್ಷದಿಂದ ಮಗನ ರೀತಿಯಲ್ಲೇ ನೋಡಿಕೊಂಡಿದ್ದಾರೆ. ಮನೆಯ ಸದಸ್ಯರಲ್ಲಿ ಇದೂ ಒಂದಾಗಿ ಬೆರೆತು ಹೋಗಿದೆ. ಇದನ್ನು ಪ್ರೀತಿಯಿಂದ 'ಕುಚಶೇತ್' ಎಂದು ಕರೆಯುತ್ತಾರೆ.
ಸುಮಾರು ಒಂದು ವರ್ಷದ ಹಿಂದೆ ಕೋಳಿಗಳನ್ನು ಸಾಗಿಸುತ್ತಿದ್ದ ಟ್ರಕ್ ನಿಂದ ಮರಿಗಳು ತಮ್ಮ ಅಂಗಡಿಯ ಮುಂದೆ ಬಿದ್ದಿದ್ದವು. ಆಗ ಅವುಗಳನ್ನು ಎತ್ತಿಕೊಂಡು ಬಂದು ಸಾಕಿದೆವು ಅಂತಾರೆ ಉಮಾಕಾಂತ್. ಇನ್ನು ಇವರ ಮಗಳು ಸುರಭಿಗೆ ಈ ಹುಂಜವೆಂದರೆ ಪ್ರಾಣವಂತೆ. ತನ್ನ ಸಹೋದರನೆಂದು ತಿಳಿದುಕೊಂಡಿದ್ದಾರಂತೆ. ಈ ಹುಂಜ ತಂದು ಒಂದು ವರ್ಷ ಕಳೆದ ಬೆನ್ನಲ್ಲೇ ಮನೆಯನ್ನೆಲ್ಲಾ ಅಲಂಕರಿಸಿ ಲೈಟಿಂಗ್ಸ್ ಮಧ್ಯೆ ಅದನ್ನು ಕೂರಿಸಿ ಸಂಭ್ರಮದಿಂದ ಅದರ ಹುಟ್ಟುಹಬ್ಬ ಆಚರಿಸಿದ್ದಾರೆ ಮನೆಮಂದಿ.
ಹುಂಜಕ್ಕೆ ತಿಲಕ ಇಟ್ಟು ಆರತಿ ಬೆಳಗಿ ಹರಸಿ ಆಶೀರ್ವದಿಸುವ ಮೂಲಕ ಇಡೀ ಕುಟುಂಬ ಸಂತಸ ಪಟ್ಟಿದೆ. ಅಂದಹಾಗೆ ಈ ಹುಂಜಕ್ಕೆ ಗೋಡಂಬಿ, ಕಡಲೆಕಾಯಿ, ನೆಚ್ಚಿನ ಆಹಾರವಂತೆ.
ಮನೆಯ ಸದಸ್ಯರ ಬರ್ತ್ಡೇ ಆಚರಿಸುವ ರೀತಿಯಲ್ಲೇ ಹುಂಜದ ಜನ್ಮದಿನ ಆಚರಿಸಿರುವ ಫೋಟೋಗಳು ಸದ್ಯ ಎಲ್ಲೆಡೆ ಹರಿದಾಡುತ್ತಿದ್ದು, ನೋಡುಗರ ಗಮನ ಸೆಳೆದಿವೆ.