ಮುಂಬೈ: ಮಹಾರಾಷ್ಟ್ರದಲ್ಲಿ ಪಕ್ಷಿ ಜ್ವರ ಪ್ರಕರಣಗಳು ಹರಡುತ್ತಿದ್ದು, ಗುರುವಾರದಂದು ಒಂಬತ್ತು ಜಿಲ್ಲೆಗಳಲ್ಲಿ 382 ಪಕ್ಷಿಗಳು ಸಾವನ್ನಪ್ಪಿರುವುದಾಗಿ ವರದಿಯಾಗಿವೆ. ಜನವರಿ 8ರಿಂದ ಇಲ್ಲಿಯವರೆಗೆ ಒಟ್ಟು 3,378 ವಿವಿಧ ಪಕ್ಷಿಗಳು ಸಾವನ್ನಪ್ಪಿರುವುದಾಗಿ ವರದಿ ದಾಖಲಾಗಿವೆ.
ಲತೂರ್, ನಾಂದೇಡ್, ನಾಸಿಕ್ ಮತ್ತು ಅಹ್ಮದ್‌ನಗರ ಸೇರಿದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ ಪಕ್ಷಿಗಳು ಸಾವನ್ನಪ್ಪಿವೆ. ಮತ್ತು ಪಕ್ಷಿಗಳ ಮಾದರಿಯನ್ನು ಪರೀಕ್ಷಿಸಿದಾಗ ಹಕ್ಕಿ ಜ್ವರ ಇರುವುದಾಗಿ ತಿಳಿದುಬಂದಿದೆ. ಇದುವರೆಗೆ ರಾಜ್ಯದ ಒಂಬತ್ತು ಜಿಲ್ಲೆಗಳು ಪಕ್ಷಿ ಜ್ವರಕ್ಕೆ ತುತ್ತಾಗಿವೆ ಎಂದು ರಾಜ್ಯ ಇಲಾಖೆ ತಿಳಿಸಿದೆ. ಈ ಹಿಂದೆ ಮುಂಬೈ, ಘೋಡ್‌ಬ್ಯಾಂಡರ್ (ಥಾಣೆ ಜಿಲ್ಲೆ) ಮತ್ತು ದಪೋಲಿಯ ಕಾಗೆಗಳಲ್ಲಿ ಮತ್ತು ಹೆರಾನ್‌ಗಳಲ್ಲಿ ಪಕ್ಷಿ ಜ್ವರ ಕಂಡುಬಂದಿತ್ತು.
ಪಶ್ಚಿಮ ಪ್ರದೇಶ ರೋಗ ರೋಗನಿರ್ಣಯ ಪ್ರಯೋಗಾಲಯವು 66 ಮಾದರಿಗಳನ್ನು ಪಡೆದುಕೊಂಡಿದೆ. ಅದರಲ್ಲಿ 44 ಮಾದರಿಗಳಿಗೆ ಫಲಿತಾಂಶಗಳನ್ನು ಘೋಷಿಸಲಾಗಿದೆ. 22 ಮಾದರಿಗಳ ಫಲಿತಾಂಶಗಳಿಗಾಗಿ ನಿರೀಕ್ಷಿಸಲಾಗಿದೆ. ಘೋಷಿತ 44 ಫಲಿತಾಂಶಗಳಲ್ಲಿ, ಪರಭಾನಿಯ ಎಂಟು ಕೋಳಿಗಳ ಮಾದರಿ, ಲತೂರ್, ಬೀಡ್ ಮತ್ತು ನಾಂದೇಡ್ ಜಿಲ್ಲೆಗಳ ಹಕ್ಕಿಗಳಲ್ಲಿ ರೋಗ ಕಾಣಿಸಿಕೊಂಡಿದೆ. ಆದರೆ ಅಕೋಲಾ, ಅಮರಾವತಿ, ಅಹ್ಮದ್‌ನಗರ, ಪುಣೆ ಮತ್ತು ಸೋಲಾಪುರದ 13 ಕೋಳಿ ಮಾದರಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ.
ದೇಶಾದ್ಯಂತ ಪಕ್ಷಿ ಜ್ವರ ಹರಡುವಿಕೆಯ ಬಗ್ಗೆ, ರಾಜ್ಯ ಸರ್ಕಾರಗಳು ಈಗ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪತ್ರಿಕೆ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಜಾಗೃತಿ ಅಭಿಯಾನವನ್ನು ಕೈಗೊಳ್ಳುತ್ತಿವೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ (ಎಫ್‌ಎಚ್‌ಡಿ) ತಿಳಿಸಿದೆ.