ಚೆನ್ನೈ(ತಮಿಳುನಾಡು): ಭಾರತೀಯ ಸೇನೆಯ ನಾಲ್ಕು ರಕ್ಷಣಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಇಂದು (ಬುಧವಾರ) ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್, ಭಾರತ ರಕ್ಷಣಾ ರಂಗದಲ್ಲಿ ಹಲವು ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದ್ದರು.
ಹೊಸ ಅಧ್ಯಾಯ ಬರೆದ ರಾವತ್: ಭಾರತೀಯ ಸೇನೆಯಲ್ಲಿ ಹಲವು ಪದೋನ್ನತಿ ಪಡೆದ ರಾವತ್, 1ನೇ ಜನವರಿ 2020ರಲ್ಲಿ ಹೊಸದಾಗಿ ರಚನೆಯಾಗಿರುವ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (Chief of Defence Staff) ಅಧಿಕಾರ ವಹಿಸಿಕೊಳ್ಳುವ ಮೂಲಕ ಹೊಸ ಅಧ್ಯಾಯ ಬರೆದಿದ್ದರು. ಅದಕ್ಕೂ ಮುನ್ನ ಅವರು ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ 57ನೇ ಮತ್ತು ಕೊನೆಯ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಗೌರವ ಹೊಂದಿದ್ದಾರೆ. ಇದರ ಜೊತೆಗೆ 40 ವರ್ಷಗಳ ವೃತ್ತಿಜೀವನದ ಅವರ ಅವಧಿಯಲ್ಲಿ ಹಲವಡೆ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ರಾವತ್ ಜನನ ಮತ್ತು ಬಾಲ್ಯ : ಉತ್ತರಾಖಂಡದ ಪೌರಿಯಲ್ಲಿ ಹಿಂದೂ ಗರ್ವಾಲಿ ರಜಪೂತ ಎಂಬ ಕುಟುಂಬದಲ್ಲಿ ಜನಿಸಿದ (ಜನನ 16 ಮಾರ್ಚ್ 1958) ರಾವತ್, ಚಿಕ್ಕವರಿದ್ದಾಗಲೇ ಸೇನೆ ಸೇರುವ ಕನಸು ಕಂಡಿದ್ದವರು. ಅವರ ಕುಟುಂಬದಲ್ಲಿದ್ದ ಸೇನಾ ಸೇವಾ ಮನೋಭಾವವೇ ಇದಕ್ಕೆ ಮೂಲ ಕಾರಣ.
ಅನೇಕ ತಲೆಮಾರುಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಅವರ ಕುಟುಂಬ ರಾವತ್ ಅವರನ್ನು ಸಹ ಸೇನೆಗೆ ಸೇರುವಂತೆ ಮಾಡಿತು. ತಂದೆ ಲಕ್ಷ್ಮಣ್ ಸಿಂಗ್ ರಾವತ್ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದರೆ, ಇವರು ರಾಷ್ಟ್ರದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದು ಇತಿಹಾಸ.
ರಾವತ್ ಶಿಕ್ಷಣ : ಡೆಹ್ರಾಡೂನ್‌ನಲ್ಲಿರುವ ಕ್ಯಾಂಬ್ರಿಯನ್ ಹಾಲ್ ಸ್ಕೂಲ್ ಮತ್ತು ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ ವ್ಯಾಸಂಗ ಮಾಡಿದ ರಾವತ್, ಖಡಕ್ವಾಸ್ಲಾ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಡೆಹ್ರಾಡೂನ್ನ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿ ತಮ್ಮ ಸೇವಾವೃತ್ತಿ ಆರಂಭಿಸಿದರು.
ಸೇನೆಯಲ್ಲಿನ ಸೇವೆ ಪರಿಗಣಿಸಿ 'ಸ್ವಾರ್ಡ್ ಆಫ್ ಹಾನರ್' ಎಂಬ ಪ್ರಶಸ್ತಿ ನೀಡಿ ಗೌರವ ನೀಡಲಾಯಿತು. ರಾವತ್ ಅವರು ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (DSSC), ವೆಲ್ಲಿಂಗ್ಟನ್, ಯುನೈಟೆಡ್ ಸ್ಟೇಟ್ಸ್ ಆರ್ಮಿ ಕಮಾಂಡ್ ಮತ್ತು ಕಾನ್ಸಾಸ್‌ನ ಫೋರ್ಟ್ ಲೀವೆನ್‌ವರ್ತ್‌ನಲ್ಲಿರುವ ಜನರಲ್ ಸ್ಟಾಫ್ ಕಾಲೇಜಿನಲ್ಲಿ ಉನ್ನತ ಕಮಾಂಡ್ ಕೋರ್ಸ್‌ನ ಪದವಿಗಳನ್ನು ಪಡೆದಿದ್ದರು.
ಸೇನೆಯಲ್ಲಿ ಸೇವೆ : 16ನೇ ಡಿಸೆಂಬರ್ 1978ರಲ್ಲಿ ಭಾರತೀಯ ಸೇನೆಯಲ್ಲಿ ದ್ವಿತೀಯ ಲೆಫ್ಟಿನೆಂಟ್ ಆಗಿ ಸೇವೆ ಆರಂಭಿಸಿದ ಅವರು, 1980ರಲ್ಲಿ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿದ್ದರು. 1984ರಲ್ಲಿ ಸೇನೆಯ Captain ಆಗಿ, 1989ರಲ್ಲಿ ಮೇಜರ್, 1998ರಲ್ಲಿ ಲೆಫ್ಟಿನೆಂಟ್ ಕರ್ನಲ್, 1ನೇ ಆಗಸ್ಟ್ 2003ರಲ್ಲಿ ಕರ್ನಲ್ ಹುದ್ದೆಗೇರಿದ್ದರು. ಅಕ್ಟೋಬರ್1, 2007ರಲ್ಲಿ ಹಿರಿತನದ ಆಧಾರ ಮೇಲೆ ಬ್ರಿಗೇಡಿಯರ್ ಸ್ಥಾನ ಅಲಂಕರಿಸಿದ್ದರು.
20ನೇ ಅಕ್ಟೋಬರ್ 2011ರಲ್ಲಿ ಭಾರತೀಯ ಸೇನೆಯ ಮೇಜರ್ ಜನರಲ್ ಆಗಿ ನಿಯುಕ್ತಿ ಹೊಂದಿದ್ದರು. 1ನೇ ಜೂನ್ 2004ರಲ್ಲಿ ಲೆಫ್ಟಿನೆಂಟ್ ಜನರಲ್ ಸ್ಥಾನಕ್ಕೆ ಬಡ್ತಿ ಪಡೆದ ರಾವತ್, ಭೂಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಭಾರತಿಯ ಸೇನೆಯಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಸೇನಾ ಮುಖ್ಯಸ್ಥರಾಗಿ ದ್ವಿಪಕ್ಷೀಯ ಭೇಟಿ : ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರು ಸೇನಾ ಮುಖ್ಯಸ್ಥರಾದ ಬಳಿಕ ನೇಪಾಳ, ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ಖಜಕಿಸ್ತಾನ್, ತುರ್ಕಿಸ್ತಾನ್, ನೇಪಾಳ, ಶ್ರೀಲಂಕಾ, ರಷ್ಯಾ, ವಿಯಟ್ನಾಂ, ತಾಂಜೇನಿಯಾ, ಕೀನ್ಯಾ, ಮಾಲ್ಡೀನ್ಸ್ ದೇಶಗಳಿಗೆ ದ್ವಿಪಕ್ಷೀಯ ಭೇಟಿ ನೀಡಿದ್ದರು.
ಕ್ರಾಂತಿಕಾರಕ ಸುಧಾರಣೆ: ಭಾರತ ರಕ್ಷಣಾ ರಂಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದ ರಾವತ್, ತ್ರಿವಿಧ ದಳಗಳು ಮತ್ತು ಸರ್ಕಾರದ ನಡುವೆ ಕೊಂಡಿಯಂತೆ ಕೆಲಸ ಮಾಡಿದ್ದರು. ದೇಶದ ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿ ಮತ್ತು ಶತ್ರು ದೇಶದ ಕಿರುಕುಳ ಬಗ್ಗೆ ಎಚ್ಚರಿಕೆ ನೀಡುವ ಮೂಲಕ ಸೈನ್ಯದ ತಾಕತ್ತಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.
ಹೆಲಿಕಾಪ್ಟರ್ ಪತನ: ಸಿಡಿಎಸ್ ಬಿಪಿನ್ ರಾವತ್ ಹಾಗೂ ಅವರ ಕುಟುಂಬದ ಕೆಲವು ಸದಸ್ಯರು ಮತ್ತು ಇತರ ಹಿರಿಯ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದ ತಮಿಳುನಾಡಿನ ಊಟಿಯ ಕೂನೂರ್ ಬಳಿ ಪತನವಾಗಿದೆ. ಪರಿಣಾಮ ಅದರಲ್ಲಿ ತೆರಳುತ್ತಿದ್ದ 13 ಜನರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ.
ರಾವತ್ ಅವರ ನಿಧನಕ್ಕೆ ಸಂತಾಪ: ಭಾರತದ ಮೊದಲ ಮತ್ತು ಪ್ರಸ್ತುತ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ಸೇವೆ ಸಲ್ಲಿಸುತ್ತಿದ್ದ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರ ದುರಂತ ಸಾವು ದೇಶಕ್ಕೆ ತುಂಬಲಾದ ನಷ್ಟ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ರಾಜಕೀಯ ಮುಖಂಡರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ವಿಶಿಷ್ಟ ಸೇವೆಗಾಗಿ ಅರಸಿ ಬಂದ ಪ್ರಶಸ್ತಿ: ಅವರ 40 ವರ್ಷಗಳ ವೃತ್ತಿಜೀವನದ ಅವಧಿಯಲ್ಲಿ, ಅವರು ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಪದಕ, ಸೇನಾ ಪದಕಗಳೊಂದಿಗೆ ಶೌರ್ಯ ಮತ್ತು ವಿಶಿಷ್ಟ ಸೇವೆಗಾಗಿ ಪ್ರಶಸ್ತಿಗಳನ್ನು ಪಡೆದಿದ್ದರು.