ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಕುಟುಂಬ ಸದಸ್ಯರ ಹತ್ಯೆ ಮತ್ತು ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಪರಾಧಿಗಳಿಗೆ ಕ್ಷಮಾದಾನ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಮುಗಿಸಿರುವ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ. ಅಪರಾಧಿಗಳ ಬಿಡುಗಡೆಯ ವೇಳೆಯ ದಾಖಲೆಗಳನ್ನು ಸಲ್ಲಿಸಲು ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸಿದ್ದರು. ಹಲವು ದಿನಗಳಿಂದ ನಡೆದ ವಿಚಾರಣೆಯನ್ನು ಇಂದು ಕೊನೆಗೊಳಿಸಿದ ಪೀಠವು, ಅಪರಾಧಿಗಳ ಬಿಡುಗಡೆಯ ವೇಳೆ ಗುಜರಾತ್ ಸರ್ಕಾರ ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ಕೋರ್ಟ್ಗೆ ಸಲ್ಲಿಸಲು ತಾಕೀತು ಮಾಡಲಾಯಿತು.
ಕೊನೆಯ ದಿನದ ವಾದ: ಬಿಲ್ಕಿಸ್ ಬಾನೊ ಪ್ರಕರಣದ ವಿಚಾರಣೆಯು ಹಲವು ತಿಂಗಳಿನಿಂದ ನಡೆಯುತ್ತಿದ್ದು, ಸುದೀರ್ಘ ವಾದ-ಪ್ರತಿವಾದಿಗಳು ನಡೆದವು. ಇಂದಿನ ಕೊನೆಯ ದಿನದ ವಿಚಾರಣೆಯಲ್ಲಿ ಅರ್ಜಿದಾರರೊಬ್ಬರನ್ನು ಪ್ರತಿನಿಧಿಸುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ಶಿಕ್ಷೆಯಿಂದ ಅಪರಾಧಿಗಳನ್ನು ಮುಕ್ತ ಮಾಡುವಾಗ ತತ್ವಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ಇದೇ ವೇಳೆ ಇನ್ನೊಬ್ಬ ವಕೀಲರಾದ ವೃಂದಾ ಗ್ರೋವರ್ ಅವರು, ಅಪರಾಧಿಗಳು ಶಿಕ್ಷೆ ಅನುಭವಿಸುವಲ್ಲಿ ತಪ್ಪಿಸಿಕೊಂಡಿದ್ದಲ್ಲದೇ ವಿಧಿಸಲಾದ ದಂಡವನ್ನೂ ಸಹ ಪಾವತಿಸುತ್ತಿಲ್ಲ ಎಂದು ಆರೋಪಿಸಿದರು.
ಅಪರಾಧಿಗಳಿಗೆ ಸುಧಾರಣೆಯ ಹಕ್ಕಿಲ್ಲವೇ?: ಅಪರಾಧಿಗಳು ಘೋರ ಅಪರಾಧ ಮಾಡಿದ್ದು, ಅವರು ಸುಧಾರಿಸುವ ಹಕ್ಕನ್ನು ಹೊಂದಿಲ್ಲವೇ ಎಂದು ಪೀಠವು ಪ್ರಶ್ನಿಸಿತು. ಪ್ರಕರಣವು ಎರಡು ವಿಪರೀತಗಳನ್ನು ಹೊಂದಿದೆ. ಒಂದು ಸಂತ್ರಸ್ತೆಯ ಮೇಲೆ ನಡೆದ ದಾಳಿ ಮತ್ತು ಅಪರಾಧಿಗಳು ಹಲವು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವುದು. ಹೀಗಾಗಿ ಶಿಕ್ಷೆಗೆ ಒಳಗಾದವರು ಮತ್ತು ಅಪರಾಧದ ಸ್ವರೂಪವನ್ನು ಹೇಗೆ ತಾಳೆ ಹಾಕಬೇಕು ಎಂಬುದನ್ನು ತಿಳಿಸಿ ಎಂದು ವಕೀಲರಿಗೆ ಕೋರ್ಟ್ ಪ್ರಶ್ನಿಸಿದೆ.
ಶಿಕ್ಷೆಯ ವಿನಾಯತಿ ನೀಡಿರುವ ಸರ್ಕಾರದ ನಿರ್ಧಾರ ತಪ್ಪಾದಲ್ಲಿ ಮತ್ತೆ ಅಪರಾಧಿಗಳು ಜೈಲಿಗೆ ಹೋಗಬೇಕಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರಂಕುಶ, ದುರಾಡಳಿತ ಮತ್ತು ಪಕ್ಷಪಾತದ ರೀತಿಯಲ್ಲಿ ವರ್ತಿಸಿವೆ. ಅವರನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡಿವೆ. ಘೋರ ಅಪರಾಧಿ ಮಾಡಿ ಸುಧಾರಣೆ ಕಂಡಿದ್ದೇನೆ ಎಂದರೆ ಹೇಗೆ?. ಹಾಗಿದ್ದರೆ ಏನು ಬೇಕಾದರೂ ಮಾಡಿ, ಅಪರಾಧಿ ಒಳ್ಳೆಯವನಾದರೆ ಬಿಡುಗಡೆಗೆ ಅರ್ಹನೇ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಇತರ ಅರ್ಜಿಗಳ ವಿಚಾರಣೆ: ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿಯ ಜೊತೆಗೆ, ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಲಖನೌ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ರೂಪ್ ರೇಖಾ ವರ್ಮಾ ಸೇರಿದಂತೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಕೂಡ ಇದೇ ವೇಳೆ ನಡೆದಿದೆ.
ಇದನ್ನೂ ಓದಿ: ಅಪರಾಧ ಮಾಡಿ, ಶಿಕ್ಷೆ ಪೂರೈಸದೇ ಬಿಡುಗಡೆಯಾಗೋದು ಮೂಲಭೂತ ಹಕ್ಕೇ.. ಬಿಲ್ಕಿಸ್ ಬಾನು ಕೇಸಲ್ಲಿ ಸುಪ್ರೀಂಕೋರ್ಟ್ ಖಡಕ್ ಪ್ರಶ್ನೆ