ನವದೆಹಲಿ: ದೇಶದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳು 'ನಿಧಾನ' ಎಂಬ ಮಾತಿದೆ. ಇದನ್ನು ಸುಳ್ಳು ಮಾಡಿದೆ ಬಿಹಾರ ನ್ಯಾಯಾಲಯ. ಅತ್ಯಾಚಾರದಂತಹ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ವಾದ- ಪ್ರತಿವಾದಗಳನ್ನು ಆಲಿಸಿದ್ದಲ್ಲದೇ ಅಪರಾಧಿಗೆ ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅತ್ಯಂತ ತ್ವರಿತವಾಗಿ ಬಂದ ಮೊದಲು ತೀರ್ಪು ಎಂಬ ದಾಖಲೆ ನಿರ್ಮಿಸಿದೆ.
ತೀರ್ಪು ಬಂದ ರೀತಿ ಹೇಗಿತ್ತು?
ಬಿಹಾರದ ಅರಾರಿಯಾದಲ್ಲಿ ಇದೇ ವರ್ಷದ ಜು.22ರಂದು 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. 23ರಂದು ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೆ.18ರಂದು ಪೋಕ್ಸೋ ನ್ಯಾಯಾಲಯಕ್ಕೆ ವರದಿ(ಚಾರ್ಜ್ಶೀಟ್) ಸಲ್ಲಿಸಿದ್ದರು.
ಅ.4ರಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಅರಾರಿಯಾ ಪೋಕ್ಸೋ ಕೋರ್ಟ್ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು, ವಾದ-ಪ್ರತಿವಾದವನ್ನು ಆಲಿಸಿದೆ. ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆ ಅದೇ ದಿನವೇ ಪ್ರಕರಣದ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದೆ. ಅಲ್ಲದೇ, ಕಾಮುಕನಿಗೆ ಜೀವಾವಧಿ ಶಿಕ್ಷೆ ಮತ್ತು ಸಂತ್ರಸ್ತೆಯ ಪುನರ್ವಸತಿಗೆ 7 ಲಕ್ಷ ರೂಪಾಯಿ ನೀಡಬೇಕು ಎಂದು ನ್ಯಾಯಾಧೀಶ ಶಶಿಕಾಂತ್ ರಾಯ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮೈಸೂರು: ತಂಗಿ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ ಕಾಮುಕ ಅಣ್ಣ
ಇದಕ್ಕೂ ಮುನ್ನ ಮಧ್ಯಪ್ರದೇಶದ ದಾಟಿಯಾ ನ್ಯಾಯಾಲಯ 3 ದಿನದಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಇದೀಗ ಬಿಹಾರದ ಅರಾರಿಯಾ ನ್ಯಾಯಾಲಯ ಒಂದೇ ದಿನದಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ಇತ್ಯರ್ಥಪಡಿಸಿ ತೀರ್ಪು ನೀಡಿದ್ದು ಹೊಸ ದಾಖಲೆಯಾಗಿದೆ.
ಇದೇ ರೀತಿಯಾಗಿ ನ್ಯಾಯಾಲಯಗಳು ತ್ವರಿತಗತಿಯಲ್ಲಿ ತೀರ್ಪು ನೀಡಿದರೆ ಸಂತ್ರಸ್ತರಿಗೆ ಶೀಘ್ರವೇ ನ್ಯಾಯ ಸಿಗುವಂತೆ ಮಾಡಲು ಸಾಧ್ಯ ಎಂದು ಕಾನೂನು ತಜ್ಱರು ಅಭಿಪ್ರಾಯಪಟ್ಟಿದ್ದಾರೆ.