ದರ್ಭಾಂಗ (ಬಿಹಾರ): ವಿಶ್ವವಿದ್ಯಾಲಯಗಳಲ್ಲಿ ಸಣ್ಣ ಪುಟ್ಟ ಅವಾಂತರಗಳು ಸೃಷ್ಟಿಯಾಗುವುದು ಸಾಮಾನ್ಯ. ಆದರೆ, ಬಿಹಾರದ ದರ್ಭಾಂಗದಲ್ಲಿರುವ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯ (ಎಲ್ಎನ್ಎಂಯು)ವು ಪರೀಕ್ಷೆಯ ಹಾಲ್ ಟಿಕೆಟ್ನಲ್ಲಿ ರಾಜ್ಯಪಾಲ ಫಗು ಚೌಹಾಣ್ ಅವರ ಭಾವಚಿತ್ರ ಮುದ್ರಿಸಿ ನಗೆಪಾಟಲಿಗೆ ಈಡಾಗಿದೆ.
ಹೌದು, ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯವು ಎಡವಟ್ಟುಗಳಿಂದಲೇ ಸುದ್ದಿಯಲ್ಲಿರುತ್ತದೆ. ಈಗಲೂ ರಾಜ್ಯಪಾಲರ ಭಾವಚಿತ್ರವಿರುವ ಪ್ರವೇಶಪತ್ರ ನೀಡಿ ಮಹಾ ಪ್ರಮಾದ ಮಾಡಿದೆ. ಸದ್ಯ ಈ ಹಾಲ್ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೇ ಸೆಪ್ಟೆಂಬರ್ 12ರಿಂದ ನಡೆಯಲಿರುವ ಬಿಎ ವಿಭಾಗ-3ನೇ ಪರೀಕ್ಷೆಯ ಹಾಲ್ಟಿಕೆಟ್ನಲ್ಲಿ ಬಿಹಾರ ರಾಜ್ಯಪಾಲ ಫಗು ಚೌಹಾಣ್ ಅವರ ಭಾವಚಿತ್ರವನ್ನು ಮುದ್ರಿಸಿ, ಭಾವಚಿತ್ರದ ಕೆಳಗಡೆ ಅವರ ಹೆಸರನ್ನೂ ಬರೆಯಲಾಗಿದೆ.
ಬೇಗುಸರಾಯ್‌ನ ರವೀಶ್ ಕುಮಾರ ಸಾನು ಎಂಬ ವಿದ್ಯಾರ್ಥಿಯ ಹೆಸರಲ್ಲಿ ಹಾಲ್ಟಿಕೆಟ್ ಇದೆ. ವಿದ್ಯಾರ್ಥಿಯ ತಂದೆ ಮತ್ತು ಪರೀಕ್ಷಾ ಕೇಂದ್ರದ ಹೆಸರು ಮತ್ತು ಪರೀಕ್ಷಾ ವಿಷಯಗಳು ಸಹ ಇದೆ. ಆದರೆ, ಭಾವಚಿತ್ರ ಜಾಗದಲ್ಲಿ ಮಾತ್ರ ರಾಜ್ಯಪಾಲರ ಭಾವಚಿತ್ರ ಇದೆ. ಹೀಗಾಗಿಯೇ ನೆಟ್ಟಿಜರ್ಗಳು ರಾಜ್ಯಪಾಲರು ಬೇಗುಸರಾಯ್‌ನಲ್ಲಿರುವ ಕಾಲೇಜಿಗೆ ಪರೀಕ್ಷೆ ಬರೆಯಲು ಬರುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಮುಜಾಫ್ಫರ್‌ಪುರ ವಿಶ್ವವಿದ್ಯಾಲಯವು ಕಳೆದ ವರ್ಷ ನೀಡಿದ್ದ ಪ್ರವೇಶ ಪತ್ರ ಕೂಡ ವಿವಾದಕ್ಕೆ ಸಿಲುಕಿತ್ತು. ವಿದ್ಯಾರ್ಥಿಯೊಬ್ಬನ ಈ ಹಾಲ್ ಟಿಕೆಟ್ನಲ್ಲಿ ನಟ ಇಮ್ರಾನ್ ಹಶ್ಮಿ ಅವರನ್ನು ತಂದೆ ಮತ್ತು ನಟಿ ಸನ್ನಿ ಲಿಯೋನ್ ತಾಯಿ ಎಂದು ಮುದ್ರಿಸಲಾಗಿತ್ತು.
ಇದನ್ನೂ ಓದಿ: ಜಗನ್ ಅಣ್ಣ ರೋಡ್ ಹಾಕಿಸಿ ಎಂದು ಹದಗೆಟ್ಟರಸ್ತೆ ಮೇಲೆ ಉರುಳಿದ ವ್ಯಕ್ತಿ!