ಪಾಟ್ನಾ(ಬಿಹಾರ): ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೋರ್ಟ್ ನಿರ್ದೇಶನದಂತೆ ಬಿಹಾರದ ಹಿರಿಯ ಐಎಎಸ್ ಅಧಿಕಾರಿ ಮತ್ತು ರಾಷ್ಟ್ರ್ರೀಯ ಜನತಾ ದಳ(ಆರ್‌ಜೆಡಿ) ಮಾಜಿ ಶಾಸಕನ ವಿರುದ್ಧ ಪೊಲೀಸರು ಮಂಗಳವಾರ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ತನ್ನ ಮೇಲೆ ಅಧಿಕಾರಿ ಮತ್ತು ಶಾಸಕ ಪೈಶಾಚಿಕ ಕೃತ್ಯ ಎಸಗಿದ್ದಾರೆ ಎಂದು ದಾನಾಪುರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದರಂತೆ ಪಾಟ್ನಾದ ರೂಪಸ್‌ಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ತಡೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.
2021ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ಮತ್ತು ಮಾಜಿ ಆರ್‌ಜೆಡಿ ಮಾಜಿ ಶಾಸಕ ಗುಲಾಬ್ ಯಾದವ್ ತನ್ನನ್ನು ಬಂದೂಕಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರುದಾರರ ಮಹಿಳೆ ಸಿವಿಲ್ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದನ್ನು ಮೊದಲು ಕೋರ್ಟ್ ತಿರಸ್ಕೃರಿಸಿತ್ತು. ಬಳಿಕ ಹೈಕೋರ್ಟ್ಗೆ ಮಹಿಳೆ ಮನವಿ ಮಾಡಿದ್ದು, ಸಿವಿಲ್ ಕೋರ್ಟ್ನಲ್ಲೇ ಅರ್ಜಿ ನಡೆಸಲು ಸೂಚಿಸಿದೆ. ಅದರಂತೆ, ಸಿವಿಲ್ ಕೋರ್ಟ್ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿತು. ಸಾಮೂಹಿಕ ಅತ್ಯಾಚಾರ ಆರೋಪದಡಿ ಇಬ್ಬರ ಮೇಲೆ ದೂರು ದಾಖಲಿಸಲಾಗಿದೆ ಎಂದು ಪಾಟ್ನಾ ಪೊಲೀಸರು ತಿಳಿಸಿದ್ದಾರೆ.
ಪ್ರಕರಣವೇನು?: ಐಎಎಸ್ ಅಧಿಕಾರಿ ಮತ್ತು ಆರ್‌ಜೆಡಿ ಮಾಜಿ ಶಾಸಕ ದೂರುದಾರ ಮಹಿಳೆಗೆ, ಮಹಿಳಾ ಆಯೋಗದ ಸದಸ್ಯೆಯನ್ನಾಗಿ ಮಾಡುವ ಭರವಸೆ ನೀಡಿದ್ದರು. ಅದರಂತೆ ಆಕೆಯನ್ನು ಹೋಟೆಲ್ವೊಂದಕ್ಕೆ ಕರೆಯಿಸಿಕೊಂಡಿದ್ದಾರೆ. ಬಳಿಕ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನು ವಿರೋಧಿಸಿದಾಗ ಆಕೆಗೆ ಬಂದೂಕಿನಿಂದ ಬೆದರಿಕೆ ಹಾಕಲಾಗಿದೆ.
ಇದರ ವಿರುದ್ಧ ಮಹಿಳೆ ಮೊದಲು ಸಿವಿಲ್ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಆದರೆ, ಪ್ರಾಥಮಿಕ ತನಿಖಾ ವರದಿ ಇಲ್ಲವೆಂಬ ಕಾರಣಕ್ಕೆ ಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಇದರ ವಿರುದ್ಧ ಮಹಿಳೆ, ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪೊಲೀಸರ ನಡೆಗೆ ಬೇಸರಿಸಿ, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸಿವಿಲ್ ನ್ಯಾಯಾಲಯದಲ್ಲೇ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿತು. ಇದೇ ವೇಳೆ ಪಾಟ್ನಾ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದೆ.
ಆರೋಪಿಗಳಿಂದ ಮಹಿಳೆಗೆ ಬೆದರಿಕೆ: ಮಹಿಳೆಯ ಜೊತೆಗೆ ಸಲುಗೆಯಿಂದ ಇದ್ದ ಐಎಎಸ್ ಅಧಿಕಾರಿ ಆಕೆಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದ. ತನ್ನ ವಿರುದ್ಧ ದೂರು ನೀಡಿದರೆ, ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ದೆಹಲಿಗೆ ಕರೆಯಿಸಿಕೊಂಡು ಹೋಟೆಲ್‌ನಲ್ಲಿ ಮಾಜಿ ಶಾಸಕನ ಜೊತೆಗೂಡಿ ತನ್ನ ಮೇಲೆ ಅತ್ಯಾಚಾರ ನಡೆಸಿದ. ಇದನ್ನು ಬಾಯ್ಬಿಟ್ಟರೆ ಬಂದೂಕಿನಿಂದ ಸುಡುವುದಾಗಿ ಹೆದರಿಸಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರುದಾರ ಮಹಿಳೆ 2021 ರಲ್ಲಿ ಪಾಟ್ನಾ ಪೊಲೀಸರಿಗೆ ಆರೋಪಿಗಳ ವಿರುದ್ಧ ಲಿಖಿತ ಕಂಪ್ಲೇಂಟ್ ನೀಡಿದ್ದಾರೆ. ಆದರೆ, ಇದು ಹೈ ಪ್ರೊಫೈಲ್ ಪ್ರಕರಣವಾದ ಕಾರಣ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದೇ ಮೌನ ವಹಿಸಿದ್ದರು. ಇವರ ವಿರುದ್ಧ ಮಹಿಳೆ ಎಸಿಜೆಎಂ ಸಿವಿಲ್ ನ್ಯಾಯಾಲಯದಲ್ಲಿ ದೂರು ಅರ್ಜಿ ಸಲ್ಲಿಸಿದ್ದರು. ಪೊಲೀಸರು ಈ ಕುರಿತು ವರದಿ ಸಲ್ಲಿಸದ ಕಾರಣ ದಾನಾಪುರ ಕೋರ್ಟ್ಅರ್ಜಿಯನ್ನು ವಜಾ ಮಾಡಿತ್ತು.
ಇದನ್ನೂ ಓದಿ: 7 ನ್ಯಾಯಾಂಗ ಅಧಿಕಾರಿಗಳು, ಇಬ್ಬರು ವಕೀಲರಿಗೆ ಜಡ್ಜ್ ಬಡ್ತಿ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಹೊಸ ಶಿಫಾರಸು