ಜಮುಯಿ, ಬಿಹಾರ : ಅಕ್ರಮ ಮರಳು ದಂಧೆ ವಿರುದ್ಧ ಕಡಿವಾಣ ಹಾಕಲು ಹೋದ ಪೊಲೀಸ್ ಅಧಿಕಾರಿಯನ್ನು ದಂಧೆಕೋರರು ಬಲಿ ತೆಗೆದುಕೊಂಡ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ. 'ಘಟನೆ ಹೊಸದೇನಲ್ಲ, ನಡೆಯುತ್ತಿರುತ್ತವೆ' ಎಂದು ಹೇಳುವ ಮೂಲಕ ಸಚಿವರೊಬ್ಬರು ವಿವಾದ ಸೃಷ್ಟಿಸಿದ್ದಾರೆ.
ಪೊಲೀಸರು ಅಕ್ರಮ ಮರಳು ದಂಧೆ ಮೇಲೆ ಕ್ರಮಕ್ಕೆ ಪೊಲೀಸರು ಗುಂಪು ರಚಿಸಿಕೊಂಡಿದ್ದರು. ಮಂಗಳವಾರ ಬೆಳಗಿನ ಜಾವ ದಾಳಿಗೆ ಸಜ್ಜಾಗಿದ್ದರು. ಈ ವೇಳೆ ಮರಳು ತುಂಬಿದ ಟ್ರ್ಯಾಕ್ಟರ್ಗಳನ್ನು ಕಂಡ ಪೊಲೀಸರು ನಿಲ್ಲಿಸುವಂತೆ ಸಿಗ್ನಲ್ ನೀಡಲಾಯಿತು. ಆದರೆ, ಟ್ರ್ಯಾಕ್ಟರ್ ಚಾಲಕ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಪೊಲೀಸ್ ಜೀಪಿನಲ್ಲಿದ್ದ ಇನ್ಸ್ಪೆಕ್ಟರ್ ಪ್ರಭಾತ್ ರಂಜನ್ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೊಬ್ಬ ಪೊಲೀಸ್ ಗಾಯಗೊಂಡಿದ್ದಾನೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಚಾಲಕನನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.
ಮೃತಪಟ್ಟ ಪೊಲೀಸ್ ಅಧಿಕಾರಿ ಪ್ರಭಾತ್ 2018ರ ಬ್ಯಾಚ್‌ನ ಇನ್ಸ್ಪೆಕ್ಟರ್ ಆಗಿದ್ದರು. ಪ್ರಭಾತ್ ರಂಜನ್ ಅವರನ್ನು ಜಮುಯಿ ಜಿಲ್ಲೆಯ ಗರ್ಹಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಮರಳು ದಂಧೆಯ ವಿರುದ್ಧ ಹೋರಾಡಲು ಹೋಗಿ ಬಲಿಯಾಗಿದ್ದಾರೆ. ಈ ಘಟನೆಯಿಂದ ಪೊಲೀಸ್ ಇಲಾಖೆಯೇ ಶಾಕ್ ಆಗಿದೆ. ಜಮುಯಿ ಎಸ್ಪಿ ಶೌರ್ಯ ಸುಮನ್ ಕಠಿಣ ಕ್ರಮಕ್ಕೆ ಸೂಚಿಸಿದ್ದು, ಈ ಕುರಿತು ತನಿಖೆ ನಡೆಸಲಾಗುವುದು. ಇದರ ಹಿಂದೆ ಯಾರೇ ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಚಿವರ ವಿವಾದಾತ್ಮಕ ಹೇಳಿಕೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಯನ್ನೇ ಬಲಿ ಪಡೆದ ಮರಳು ದಂಧೆ ಹೊಸದೇನಲ್ಲ, ಹೀಗೆ ಸಾವುಗಳು ಆಗುತ್ತವೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದ ಸೃಷ್ಟಿಸಿದ್ದಾರೆ.
ಜಮುಯಿಯಲ್ಲಿ ಇನ್ಸ್ಪೆಕ್ಟರ್ ಹತ್ಯೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದಾಗ, ಸಚಿವ ಪ್ರೊ.ಚಂದ್ರಶೇಖರ್, ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದು ಸಾಮಾನ್ಯ ಘಟನೆ. ಇದೇನು ಮೊದಲ ಬಾರಿಗೆ ನಡೆದ ಘಟನೆಯೇ?. ಉತ್ತರ ಪ್ರದೇಶದ, ಮಧ್ಯಪ್ರದೇಶದಲ್ಲಿ ಆಗಿಲ್ಲವೇ?. ಬಿಹಾರದಲ್ಲೂ ಇಂತಹ ಘಟನೆಗಳು ನಡೆಯುತ್ತಿರುತ್ತವೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಸಮಷ್ಟಿಪುರದಲ್ಲಿ ಪ್ರಾಣಿ ಕಳ್ಳಸಾಗಣೆದಾರರು ಸಬ್ಇನ್ಸ್ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಧಿಕಾರಿ ನಂದ್ ಕಿಶೋರ್ ಯಾದವ್ ಅವರನ್ನು ಪ್ರಾಣಿ ಕಳ್ಳಸಾಗಣೆದಾರರು ಹತ್ಯೆ ಮಾಡಿದ್ದರು. ನಂದ್ ಕಿಶೋರ್ ಅವರು ದನಗಳ ಕಳ್ಳಸಾಗಣೆದಾರರನ್ನು ಹಿಡಿಯಲು ಹೋದಾಗ, ಪೊಲೀಸ್ ತಂಡದ ಮೇಲೆಯೇ ಗುಂಡಿನ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ಐಟಿ ಕಂಪನಿಗೆ ಹುಸಿ ಬಾಂಬ್ ಕರೆ: ಬೆಳಗಾವಿ ಯುವತಿ ಮನೆಗೆ ದೌಡಾಯಿಸಿದ ಬೆಂಗಳೂರು ಪೊಲೀಸ್