ಗಯಾ(ಬಿಹಾರ): ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಇಂಜಿನಿಯರಿಂಗ್ ಓದಬೇಕು ಅನ್ನೋದು ಅನೇಕ ವಿದ್ಯಾರ್ಥಿಗಳ ಬಹುದೊಡ್ಡ ಕನಸು. ರಾಷ್ಟ್ರಮಟ್ಟದ ಇಂಥ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದುಕೊಳ್ಳಬೇಕಾದ್ರೆ ಕಠಿಣ ಜೆಇಇ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ಗಿಟ್ಟಿಸಿಕೊಳ್ಳುವುದು ಅತಿ ಅವಶ್ಯ. ಅದಕ್ಕಾಗಿ ಶ್ರೀಮಂತರ ಮಕ್ಕಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ತರಬೇತಿ ಪಡೆದುಕೊಳ್ತಾರೆ. ಕಷ್ಟಪಟ್ಟು ಓದಿ ಬಡ, ಮಧ್ಯಮವರ್ಗದ ಮಕ್ಕಳೂ ಇಲ್ಲಿ ಯಶ ಕಂಡಿರುವ ಅನೇಕ ಉದಾಹರಣೆಗಳಿವೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಮಾತ್ರ ಪ್ರತಿವೊಂದು ಮನೆಯಲ್ಲೂ ಐಐಟಿ ವಿದ್ಯಾರ್ಥಿಗಳಿದ್ದಾರೆ.
ಒಂದು ಕಾಲದಲ್ಲಿ ಬಟ್ಟೆ ಉತ್ಪಾದನೆಗೆ ಹೆಸರಾಗಿದ್ದ ಬಿಹಾರದ ಗ್ರಾಮ ಇದೀಗ ಐಐಟಿಯನ್ನರ ಫ್ಯಾಕ್ಟರಿ ಎಂದರೆ ತಪ್ಪಾಗಲಾರದು. ಜೆಇಇಗೆ ಪರಿಶ್ರಮದಾಯಕ ತಯಾರಿ ನಡೆಸಿ, ಐಐಟಿ ಸಂಸ್ಥೆಗಳಲ್ಲಿ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗ್ತಿದ್ದು, ವರ್ಷದಿಂದ ವರ್ಷಕ್ಕೆ ಇದರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಬಿಹಾರದ ಗಯಾ ಜಿಲ್ಲೆಯ ಮನ್ಪುರ್ ಪ್ರದೇಶದ ಪಟ್ಟಾಟೋಲಿ ಎಂಬ ಹಳ್ಳಿಯ ವಿದ್ಯಾರ್ಥಿಗಳು ಈ ಸಾಧನೆ ಮಾಡ್ತಿದ್ದಾರೆ. ಈ ಗ್ರಾಮದಲ್ಲಿರುವ ಜನರು ಶ್ರೀಮಂತರೇನಲ್ಲ. ಆದರೆ, ಗ್ರಾಮದಲ್ಲಿರುವ ಗ್ರಂಥಾಲಯದಲ್ಲಿನ ಸೌಲಭ್ಯಗಳಿಂದ ಕಬ್ಬಿಣದ ಕಡಲೆಯೆಂದೇ ಪರಿಗಣಿಸುವ ಪರೀಕ್ಷೆ ಪಾಸ್ ಮಾಡ್ತಿದ್ದಾರೆ. ಪ್ರತಿ ವರ್ಷ ಈ ಗ್ರಾಮದ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾವುದೇ ತರಬೇತಿ ಇಲ್ಲದೇ ಜೆಇಇಗೆ ಆಯ್ಕೆಯಾಗ್ತಿದ್ದಾರೆ.
ಇದನ್ನೂ ಓದಿ: ಒಂದೇ ನಿಮಿಷದಲ್ಲಿ 150 ತೆಂಗಿನಕಾಯಿ ಒಡೆದು ದಾಖಲೆ ಬರೆದ ಕಾರ್ಮಿಕ: ವಿಡಿಯೋ
1996ರಲ್ಲಿ ಗ್ರಾಮದ ಜಿತೇಂದ್ರ ಎಂಬ ಯುವಕ ಐಐಟಿ ಪಾಸ್ ಆಗುತ್ತಾನೆ. ಅಂದಿನಿಂದಲೂ ಸ್ಫೂರ್ತಿ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಜೆಇಇ ತೇರ್ಗಡೆ ಹೊಂದುತ್ತಿದ್ದಾರೆ. ಜಿತೇಂದ್ರ ಅವರು ಗ್ರಾಮದಲ್ಲಿ ವೃಕ್ಷ ಎಂಬ ಹೆಸರಿನಲ್ಲಿ ಗ್ರಂಥಾಲಯ ಪ್ರಾರಂಭಿಸಿದ್ದು, ಮಕ್ಕಳು ಉಚಿತವಾಗಿ ಓದಬಹುದಾಗಿದೆ. ಐಐಟಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಓದಿರುವ ಅಥವಾ ಐಐಟಿ ಮಾಡ್ತಿರುವವರು ಆನ್ಲೈನ್ ಕೋಚಿಂಗ್ ಕೂಡಾ ನೀಡುತ್ತಾರೆ. 10 ಮತ್ತು 12ನೇ ತರಗತಿ ಮಕ್ಕಳು ಇಲ್ಲಿಗೆ ಬರುತ್ತಾರೆ.
ಸುಮಾರು 10 ಸಾವಿರ ಜನಸಂಖ್ಯೆಯ ಪಟ್ಟಾಟೋಲಿಯಲ್ಲಿದ್ದು, ಇವರ ಮುಖ್ಯ ವೃತ್ತಿ ಕೇವಲ ನೇಕಾರಿಕೆಯಾಗಿದ್ದು, ಅನೇಕರು ಐಐಟಿ ಪಾಸ್ ಮಾಡ್ತಿದ್ದಾರೆ. 1998ರಲ್ಲಿ ಮೂವರು ಐಐಟಿ ಪ್ರವೇಶ ಪಡೆದುಕೊಂಡಿದ್ದು, 1999ರಲ್ಲಿ ಏಳು ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಇದಾದ ಬಳಿಕ ಇಲ್ಲಿಯವರೆಗೆ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಐಟಿಗೆ ಸೇರಿದ್ದು, ಅನೇಕರು NIT ಮತ್ತು ಇತರೆ ಉನ್ನತ ಸಂಸ್ಥೆಗಳಲ್ಲಿ ಕೆಲಸ ಮಾಡ್ತಿದ್ದಾರೆ. 2014ರಲ್ಲಿ 13 ವಿದ್ಯಾರ್ಥಿಗಳು, 2015ರಲ್ಲಿ 12, 2016ರಲ್ಲಿ 11, 2017ರಲ್ಲಿ 20, 2018ರಲ್ಲಿ ಐದು ವಿದ್ಯಾರ್ಥಿಗಳು, 2021ರಲ್ಲಿ 20 ವಿದ್ಯಾರ್ಥಿಗಳು ಐಐಟಿಯಲ್ಲಿ ಪಾಸ್ ಆಗಿದ್ದಾರೆ. ಇದುವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಗ್ರಾಮದಲ್ಲಿ ಓದಿದ್ದಾರೆ.