ಕತಿಹಾರ್ : ಬಿಹಾರದ ಸಹಕಾರಿ ಸಚಿವ ಹಾಗೂ ರಾಷ್ಟ್ರೀಯ ಜನತಾದಳದ ಮುಖಂಡ ಸುರೇಂದ್ರ ಯಾದವ್ ಅವರು ಅಗ್ನಿಪಥ್ ಯೋಜನೆ ವಿರುದ್ಧ ಗುರುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಚಿವರು ಅಗ್ನಿವೀರರನ್ನು "ಹಿಜ್ರೋನ್ ಕಿ ಫೌಜ್" (ನಪುಂಸಕರ ಸೇನೆ) ಎಂದು ಕರೆದಿದ್ದಾರೆ. ಅಲ್ಲದೇ ಎಂಟೂವರೆ ವರ್ಷದ ಬಳಿಕ ದೇಶವು ನಪುಂಸಕರ ಸೇನೆಯನ್ನು ಹೊಂದಲಿದೆ ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ಅಗ್ನಿಪಥ್ ಯೋಜನೆಯಿಂದ ಭಾರತೀಯ ಸೇನೆ ದುರ್ಬಲವಾಗಲಿದೆ. ಮುಂದಿನ ವರ್ಷಗಳಲ್ಲಿ ಈಗಿನ ಸೈನಿಕರು ನಿವೃತ್ತಿ ಹೊಂದಲಿದ್ದು, ಅಗ್ನಿವೀರರು ಮಾತ್ರ ದೇಶಸೇವೆ ಮಾಡಲಿದ್ದಾರೆ ಮತ್ತು ನಾಲ್ಕು ವರ್ಷಗಳಲ್ಲಿ ಅವರೂ ನಿವೃತ್ತರಾಗಲಿದ್ದಾರೆ. ಅಗ್ನಿವೀರ್ ಸೈನಿಕರು ತಮ್ಮ ತರಬೇತಿ ಅವಧಿಗೆ ಮುನ್ನವೇ ನಿವೃತ್ತರಾಗುತ್ತಾರೆ ಎಂದು ಹೇಳಬಹುದು. ನಿಖರವಾಗಿ 8.5 ವರ್ಷಗಳ ನಂತರ ದೇಶದ ಹೆಸರನ್ನು ನಪುಂಸಕರ ಸೇನೆ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದಿದ್ದಾರೆ.
ಯೋಜನೆ ಸಂಪೂರ್ಣ ಅಸಂಬದ್ಧ: ಫೆ. 25 ರಂದು ಪೂರ್ಣಿಯಾದಲ್ಲಿ ನಡೆಯಲಿರುವ ಮಹಾಮೈತ್ರಿಕೂಟದ ರ‍್ಯಾಲಿಗಾಗಿ ಸಚಿವರು ಜಿಲ್ಲೆಗಳ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರು ಕತಿಹಾರ್‌ನಲ್ಲಿ ಅಗ್ನಿವೀರರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು. ಮೋದಿ ಸರ್ಕಾರದ ನೀತಿಗಳನ್ನು ಟೀಕಿಸಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಗ್ನಿವೀರ ಯೋಜನೆಯು ಸಂಪೂರ್ಣ ಅಸಂಬದ್ಧ. ಈ ಯೋಜನೆ ಜಾರಿಗೆ ತಂದವರನ್ನು ಗಲ್ಲಿಗೇರಿಸಬೇಕು ಎಂದು ಅವರು ಕಿಡಿಕಾರಿದ್ದಾರೆ. ಯಾದವ್ ಅವರ ವಿವಾದಾತ್ಮಕ ಹೇಳಿಕೆಯಿಂದ ಆರ್‌ಜೆಡಿ ಅಂತರ ಕಾಪಾಡಿಕೊಂಡಿದೆ. ಅವರ ಹೇಳಿಕೆಯನ್ನು ಪಕ್ಷ ಅನುಮೋದಿಸುವುದಿಲ್ಲ ಎಂದು ಆರ್‌ಜೆಡಿ ವಕ್ತಾರ ಶಕ್ತಿ ಯಾದವ್ ಹೇಳಿದ್ದಾರೆ. ಭಾರತೀಯ ಸೇನೆಯು ದೇಶಕ್ಕೆ ಹೆಮ್ಮೆ ಮತ್ತು ನಾವು ಸೇನೆಯನ್ನು ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಅಗ್ನಿಪಥ್ ಯೋಜನೆ: ಕಳೆದ ವರ್ಷ ಜೂನ್ 14 ರಂದು ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸೈನಿಕರ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆಗೆ ಅಗ್ನಿಪಥ್ ಎಂದು ಹೆಸರಿಸಲಾಯಿತು ಮತ್ತು ಆಯ್ಕೆಯಾದ ಅಭ್ಯರ್ಥಿಗಳನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅವರು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಇದು ಸರ್ಕಾರವು ಪರಿಚಯಿಸಿದ ಪ್ರಮುಖ ರಕ್ಷಣಾ ನೀತಿ ಸುಧಾರಣೆಯಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.
ಸೇನಾ ಯೋಧರಿಗಿಂತ ಅಗ್ನಿವೀರರು ಎಷ್ಟು ಭಿನ್ನ?: ಅಗ್ನಿವೀರರು ಪಡೆಯುವ ಸಂಬಳ ಅವರು ಸೇರ್ಪಡೆಗೊಂಡಾಗ 30 ಸಾವಿರ ರೂಪಾಯಿ. ಇದರಲ್ಲಿ ಶೇ.30ರಷ್ಟು ವೇತನವನ್ನು ಸರ್ಕಾರ ಕಡಿತಗೊಳಿಸಿ ಅಗ್ನಿವೀರರ ಹೆಸರಿನಲ್ಲಿ ಮಾಡಿರುವ ಸೇವಾ ನಿಧಿಗೆ ಜಮಾ ಮಾಡುತ್ತದೆ. ಆದ್ದರಿಂದ ಅಗ್ನಿವೀರರ ಕೈಗೆ ಮೊದಲ ವರ್ಷ 21 ಸಾವಿರ ರೂಪಾಯಿ ವೇತನ ಸಿಗಲಿದೆ. ಇದು ಇಡೀ ವರ್ಷಕ್ಕೆ ಅನ್ವಯಿಸುತ್ತದೆ. ವಿಶೇಷ ಎಂದರೆ ಅಗ್ನಿವೀರರರ ಸಂಬಳದಲ್ಲಿ ಎಷ್ಟು ಹಣವನ್ನು ಸರ್ಕಾರ ಕಡಿತಗೊಳಿಸುತ್ತದೆಯೋ ಅಷ್ಟೂ ಮೊತ್ತವನ್ನು ತನ್ನ ಪರವಾಗಿ ಅವರ ನಿಧಿಗೆ ಠೇವಣಿ ಇಡುತ್ತದೆ.
ಸೇವಾ ಅವಧಿ: ಅಗ್ನಿವೀರರಿಗಳಿಗೆ 4 ವರ್ಷಗಳವರೆಗೆ ಉದ್ಯೋಗವಿರುತ್ತದೆ. ಸೇನಾ ಸಿಬ್ಬಂದಿ ಕನಿಷ್ಠ 15 ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಮಾತ್ರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.
ಪಿಂಚಣಿ ಹಾಗೂ ನಿವೃತ್ತಿ ಪ್ರಯೋಜನ: ಸೇನಾ ಸೈನಿಕರು 15 ವರ್ಷಗಳ ಸೇವೆಯ ನಂತರ ನಿವೃತ್ತರಾದಾಗ ಪಿಂಚಣಿ ಮತ್ತು ಗ್ರಾಚ್ಯುಟಿಯ ಪ್ರಯೋಜನ ಪಡೆಯುತ್ತಾರೆ. ಆದರೆ ಅಗ್ನಿವೀರರು 4 ವರ್ಷಗಳ ನಂತರ ಪಿಂಚಣಿ ಹಾಗೂ ಗ್ರಾಚ್ಯುಟಿಯಂತಹ ಪ್ರಯೋಜನ ಪಡೆಯುವುದಿಲ್ಲ.
ವಿಭಿನ್ನ ಬ್ಯಾಡ್ಜ್‌ಗಳು: ಅಗ್ನಿವೀರರಿಗೆ ವಿಭಿನ್ನ ಗುರುತು ಸಿಗಲಿದೆ. 'ಅಗ್ನಿವೀರ' ತನ್ನ ಸೇವಾ ಅವಧಿಯಲ್ಲಿ ತನ್ನ ಸಮವಸ್ತ್ರದ ಮೇಲೆ ವಿಶಿಷ್ಟ ಚಿಹ್ನೆಯನ್ನು ಧರಿಸುತ್ತಾರೆ. ಅಗ್ನಿವೀರರ ಬ್ಯಾಡ್ಜ್ ಭೂಸೇನೆ, ನೌಕಾಪಡೆ ಹಾಗೂ ಏರ್ ಮೆನ್ ಗಳಿಗಿಂತ ವಿಭಿನ್ನವಾಗಿರುತ್ತದೆ.
ರಜಾ ದಿನಗಳಲ್ಲಿ ಕಡಿತ: ಅಗ್ನಿವೀರರಿಗೆ ವರ್ಷದಲ್ಲಿ 30 ರಜೆ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಗತ್ಯಕ್ಕೆ ಅನುಗುಣವಾಗಿ ಅವರಿಗೆ ವೈದ್ಯಕೀಯ ರಜೆ ನೀಡಲಾಗುತ್ತದೆ. ಆದರೆ ಸೇನೆಯ ನಿಯಮಿತ ಸೇವೆಯಲ್ಲಿ ಕೆಲಸ ಮಾಡುವವರಿಗೆ ವರ್ಷದಲ್ಲಿ 90 ರಜೆಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆ: ಸೈನ್ಯ ಸೇರಲು ಆರೇ ದಿನಗಳಲ್ಲಿ 2 ಲಕ್ಷ ಅರ್ಜಿ