ಪಾಟ್ನಾ: "ಬಜರಂಗದಳದಂತಹ ಯಾವುದೇ ಸಂಘಟನೆಯು ಒಳ್ಳೆಯ ಕೆಲಸಗಳನ್ನು ಮಾಡಿದರೆ, ನಾವು ಅದನ್ನು ಪ್ರಶಂಸಿಸುತ್ತೇವೆ. ಆದರೆ ಈ ಸಂಘಟನೆಯ ಕಾರ್ಯಕರ್ತರು ತಪ್ಪು ಕೆಲಸಗಳಲ್ಲಿ ತೊಡಗಿಸಿಕೊಂಡರೆ ನಾವು ಸಹಿಸುವುದಿಲ್ಲ. ಬಿಹಾರ ಸರ್ಕಾರ ಕೂಡಲೇ ಬಜರಂಗದಳದ ಮೇಲೆ ನಿಷೇಧ ಹೇರದಿದ್ದರೆ ನಾನೇ ನಿಷೇಧ ಮಾಡುವೆ" ಎಂದು ಜೆಡಿಯು ಸಂಸದ ಕೌಶಲೇಂದ್ರ ಕುಮಾರ್ ಬುಧವಾರ ಹೇಳಿದ್ದಾರೆ. ಈ ವರ್ಷದ ರಾಮನವಮಿ ಸಂದರ್ಭದಲ್ಲಿ ಬಿಹಾರಶರೀಫ್ ನಳಂದದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
"ನಾನು ಕೂಡ ಹಿಂದು. ಹನುಮಂತನ ದೇವಸ್ಥಾನ ಕಂಡಾಗ ನನ್ನ ತಲೆ ನಮ್ಮ ಪ್ರಭು ಬಜರಂಗಬಲಿಯ ಮುಂದೆ ತಾನಾಗಿಯೇ ಬಾಗುತ್ತದೆ. ಹನುಮಂತ ಬಿಹಾರಷರೀಫ್‌ನಲ್ಲಿ ಜನರನ್ನು ಒಟ್ಟುಗೂಡಿಸಿ ಗೂಂಡಾಗಿರಿ ಮತ್ತು ಕೋಮುಗಲಭೆಗಳನ್ನು ಮಾಡುವಂತೆ ಹೇಳಿಲ್ಲ. ಆದರೆ ಬಜರಂಗದಳ ಮತ್ತು ಹನುಮಂತನ ಹೆಸರಿನಲ್ಲಿ ಗಲಭೆ ಮಾಡುತ್ತಿರುವುದು ತಪ್ಪು'' ಎಂದು ಕುಮಾರ್ ಹೇಳಿದರು.
"ಇತ್ತೀಚೆಗೆ ನಡೆದ ರಾಮನವಮಿ ಮೆರವಣಿಗೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ನಿಗದಿಪಡಿಸುವಂತೆ ನಾನು ನಳಂದ ಜಿಲ್ಲಾಧಿಕಾರಿಗೆ ಸೂಚಿಸಿದ್ದೆ. ಆದರೆ ಅದು ಆಗಲಿಲ್ಲ. ಪಾಟ್ನಾ ಮತ್ತು ಇತರ ಜಿಲ್ಲೆಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬಿಹಾರಷರೀಫ್‌ನಲ್ಲಿ ಜಮಾಯಿಸಿದ್ದರು. ದೇವರ ಹೆಸರಿನಲ್ಲಿ ಗಲಭೆ ನಡೆಸಿದ್ದರು. ಆದ್ದರಿಂದ, ಸರ್ಕಾರ ಬಜರಂಗದಳವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದೇನೆ" ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ವಿರುದ್ಧ ಆರೋಪ: ವಿಧಾನ ಪರಿಷತ್ ಸದಸ್ಯ ಸಾಮ್ರಾಟ್ ಚೌಧರಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಮದ್ಯ ಮಾಫಿಯಾಗಳಿಂದ ಜನತಾ ದಳ (ಯುನೈಟೆಡ್) ಪಕ್ಷ 10,000 ಕೋಟಿ ರೂಪಾಯಿ ಗಳಿಸುತ್ತಿದೆ ಎಂದು ಹೇಳಿದ್ದಾರೆ. "ನಿತೀಶ್ ಕುಮಾರ್ ಅವರು ತಮ್ಮ ಆಡಳಿತದ ಮೂಲಕ ಪ್ರತಿ ಹಳ್ಳಿಯಲ್ಲಿ ಮದ್ಯದ ಮಾಫಿಯಾಗಳನ್ನು ಸೃಷ್ಟಿಸಿದ್ದು ಪಕ್ಷದ ನಿಧಿಗಾಗಿ 10,000 ಕೋಟಿ ರೂ ಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಇದು ಬಿಹಾರದಲ್ಲಿ ದೊಡ್ಡ ಹಗರಣ" ಎಂದು ಧರಣಿ ವೇಳೆ ಚೌಧರಿ ಹೇಳಿದರು.
ಇದನ್ನೂ ಓದಿ: ರಾಮನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ.. ವಡೋದರಾದಲ್ಲಿ ಪೊಲೀಸರು ಹೈ ಅಲರ್ಟ್