ಪಾಟ್ನಾ(ಬಿಹಾರ) : ಪಾಟ್ನಾ-ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಿಹಾರದ ಭಾಗಲ್ಪುರ್ ಜಿಲ್ಲೆಯ ಗೋಪಾಲಪುರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಒಳ ಉಡುಪಿನಲ್ಲೇ ತಿರುಗಾಡುತ್ತಿರುವ ಫೋಟೋ ವೈರಲ್ ಆಗಿದೆ.
ಅದೇ ಬೋಗಿಯಲ್ಲಿ ಮಹಿಳೆಯರೂ ಇದ್ದು, ಶಾಸಕರು ಹೀಗೆ ಒಳ ಉಡುಪಿನಲ್ಲಿ ಶೌಚಾಲಯದ ಕಡೆ ತೆರಳಿದ್ದು ಸರಿಯಲ್ಲ ಎಂದು ಪ್ರಹ್ಲಾದ್ ಪಾಸ್ವಾನ್ ಎಂಬ ಸಹ ಪ್ರಯಾಣಿಕ ಗಲಾಟೆ ಮಾಡಿದ್ದಾರೆ. ಬಳಿಕ ರೈಲ್ವೆ ಭದ್ರತಾ ಸಿಬ್ಬಂದಿ (ಆರ್‌ಪಿಎಫ್) ಬಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಶಾಸಕರ ವಿರುದ್ಧ ಪ್ರಹ್ಲಾದ್ ಯಾವುದೇ ಲಿಖಿತ ದೂರು ದಾಖಲಿಸಿಲ್ಲ ಎಂದು ಆರ್‌ಪಿಎಫ್ ಸಿಬ್ಬಂದಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಾರ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದವರನ್ನೂ ಶಾಸಕರು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಕೆಲಸದಿಂದ ಕಿತ್ತು ಹಾಕಿದ ರೆಸ್ಟೋರೆಂಟ್ನಲ್ಲೇ ಕಳ್ಳತನ.. ಸಿಸಿಟಿವಿಯಲ್ಲಿ ಖದೀಮ ಸೆರೆ
ಶಾಸಕ ಗೋಪಾಲ್ ಮಂಡಲ್ ಪ್ರತಿಕ್ರಿಯೆ
ತಾವು ಒಳ ಉಡುಪಿನಲ್ಲಿ ಕಾಣಿಸಿಕೊಂಡದ್ದಕ್ಕೆ ಶಾಸಕ ಗೋಪಾಲ್ ಮಂಡಲ್ ಸ್ಪಷ್ಟನೆ ನೀಡಿದ್ದಾರೆ. ನಾನು ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿದ್ದು, ನನ್ನ ಹೊಟ್ಟೆ ಸರಿಯಿರಲಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಹೊಟ್ಟೆ ನೋವು ಕಾಣಿಸಿಕೊಂಡ ತಕ್ಷಣವೇ ನಾನು ವಾಶ್ ರೂಂಗೆ ಹೋಗಬೇಕಾಯಿತು. ಜುಬ್ಬ-ಪೈಜಾಮ ಹಾಕಿಕೊಂಡು ಹೋಗಲಾಗಿಲ್ಲ. ಇನ್ನು, ಅಲ್ಲಿ ಯಾವುದೇ ಮಹಿಳೆ ಇರಲಿಲ್ಲ ಎಂದಿದ್ದಾರೆ.
ಪ್ರತಿಪಕ್ಷಗಳು ಕಿಡಿ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ಶಾಸಕ ಮತ್ತು ಮುಖ್ಯ ವಕ್ತಾರ ಭಾಯ್ ವೀರೇಂದ್ರ, ಸಿಎಂ ನಿತೀಶ್ ಕುಮಾರ್ ಅವರು ಇಂತಹ ಕೆಟ್ಟ ನಡವಳಿಕೆಯನ್ನು ಗಮನಿಸಬೇಕು. ಇಂಥಹ ಕಾರಣಗಳಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಹಾರದ ಅಪಖ್ಯಾತಿಗೆ ಇಂಥಹ ಘಟನೆಗಳು ಕಾರಣವೆಂದು ಲೋಕ ಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಕಿಡಿಕಾರಿದ್ದಾರೆ. ಕೇವಲ ಬೆರಳೆಣಿಕೆ ಶಾಸಕರನ್ನು ಹೊಂದಿರುವ ನಿತೀಶ್ ಕುಮಾರ್ ಜನಪ್ರತಿನಿಧಿಗಳೊಂದಿಗೆ ಕೆಲವು ಸಮಯ ಕಳೆದು, ಸಾರ್ವಜನಿಕ ವಲಯದಲ್ಲಿ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬುದನ್ನು ಅವರಿಗೆ ಪಾಠ ಮಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ.