ಚಪ್ರಾ (ಬಿಹಾರ): ಶಂಕಿತ ನಕಲಿ ಮದ್ಯ ಸೇವನೆಯಿಂದ ಸುಮಾರು ಆರು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಭೂಲ್‌ಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಭೂಲ್ ಪುರ ಗ್ರಾಮದ ನಿವಾಸಿಗಳಾದ ಕಾಮೇಶ್ವರ್ ಮಹ್ತೋ ಅಲಿಯಾಸ್ ಲೋಹಾ, ರಾಮಜೀವನ್ ಅಲಿಯಾಸ್ ರಾಜೇಂದ್ರ ರಾಮ್, ರೋಹಿತ್ ಸಿಂಗ್ ಮತ್ತು ಪಾಪು ಸಿಂಗ್ ಹಾಗೂ ಗರ್ಖಾ ಓಧಾ ಗ್ರಾಮದ ಮೊಹಮ್ಮದ್ ಅಲಾವುದ್ದೀನ್ ಖಾನ್ ಎಂದು ಗುರುತಿಸಲಾಗಿದೆ.
ಇನ್ನು ಹಲವರು ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ ರಾಮನಾಥ್ ಎಂಬವರು ಮುಚ್ಕನಪುರ ಗ್ರಾಮದ ಮಹಿಳೆಯಿಂದ ಮದ್ಯ ಖರೀದಿಸಿದಾಗಿ ಹೇಳಿದ್ದಾರೆ. ರಾಮನಾಥ್ ಎಂಬವರಿಗೆ ಮದ್ಯ ಸೇವಿಸಿದ ಬಳಿಕ ವಾಂತಿ ಶುರುವಾಗಿದ್ದು, ತಕ್ಷಣ ಅವರ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ತಿಂಗಳಲ್ಲಿ ಸರನ್ ಜಿಲ್ಲೆಯಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, ಇಡೀ ವರ್ಷದಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ ಎಂದು ತಿಳಿದು ಬಂದಿದೆ. ಆಗಸ್ಟ್ 4 ರಂದು ಭೆಲ್ಡಿ ಮತ್ತು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಳಲ್ಲಿ ನಕಲಿ ಮದ್ಯ ಸೇವಿಸಿ 13 ಜನ ಸಾವನ್ನಪ್ಪಿದ್ದು, ಒಟ್ಟು 15 ಕ್ಕೂ ಅಧಿಕ ಜನರು ತಮ್ಮ ದೃಷ್ಟಿಗಳನ್ನು ಕಳೆದುಕೊಂಡಿದ್ದರು.
ಏಪ್ರಿಲ್ 2016 ರಿಂದ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದ್ದು, ಅದಾಗ್ಯೂ, ರಾಜ್ಯದಲ್ಲಿ ನಕಲಿ ಮದ್ಯವನ್ನು ಸೇವಿಸಿ ನಾಗರಿಕರು ಸಾವನ್ನಪ್ಪಿವುದು ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ : ಮಾಂಟೆನೆಗ್ರೋದಲ್ಲಿ ಶೂಟೌಟ್: ಬೇಟೆ ಬಂದೂಕಿನಿಂದ 10 ಮಂದಿ ಗುಂಡಿಕ್ಕಿ ಕೊಂದ ಹಂತಕ