ಪಾಟ್ನಾ : ಕಳೆದ ಕೆಲ ದಿನಗಳಿಂದ ಬಿಹಾರದ ಮೈತ್ರಿ ಸರ್ಕಾರದ ಭಾಗವಾಗಿರುವ ಬಿಜೆಪಿ ಹಾಗೂ ವಿಪಕ್ಷ ನಾಯಕರ ಟೀಕೆಗಳನ್ನು ಎದುರಿಸುತ್ತಿರುವ ಸಿಎಂ ನಿತೀಶ್ ಕುಮಾರ್ ಸರ್ಕಾರ 'ಬಿಹಾರ ನಿಷೇಧ ಕಾನೂನು 2016 (bihar prohibition law 2016) ಕಾಯ್ದೆಯ ಕಠಿಣ ನಿರ್ಬಂಧಗಳ ಸಡಿಲಿಕೆಗೆ ಮುಂದಾಗಿದೆ.
ಈ ಸಂಬಂಧ ಅಬಕಾರಿ ಇಲಾಖೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ರಾಜ್ಯ ಗೃಹ ಇಲಾಖೆಯ ಪರಿಶೀಲನೆಗಾಗಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೊಸ ತಿದ್ದುಪಡಿಯ ಕಾಯ್ದೆ ಜಾರಿಯಾದರೆ ಮದ್ಯ ಮಾರಾಟದಲ್ಲಿ ತೊಡಗಿರುವವರಿಗೆ ಹಾಗೂ ಮದ್ಯ ಸೇವನೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವವರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಲಿದೆ.
ಅಪರಾಧದ ಗಂಭೀರತೆಗೆ ಅನುಗುಣವಾಗಿ ದಂಡ ಅಥವಾ ಜೈಲು ಶಿಕ್ಷೆ ಕಡಿಮೆಗೊಳಿಸಲಾಗುತ್ತದೆ. ಜೊತೆಗೆ ಇಂತಹ ಪ್ರಕರಣಗಳ ವಿಲೇವಾರಿ ಮಾಡಲು ಪ್ರತ್ಯೇಕ ನ್ಯಾಯಾಲಯಗಳ ಸ್ಥಾಪನೆ ಹಾಗೂ ಸಾಮಾನ್ಯ ಸಂದರ್ಭಗಳಲ್ಲಿ ಪರಿಹಾರಕ್ಕಾಗಿ ಅವಕಾಶವಿರುತ್ತದೆ ಎಂದು ಮೂಲಗಳು ತಿಳಿಸಿವೆ.
'ಬಿಹಾರ ಮದ್ಯ ನಿಷೇಧ ಕಾನೂನು 2016'ರ ಕಾಯ್ದೆಗೆ ತಿದ್ದುಪಡಿ ಸಂಬಂಧ ಹೊಸ ಪ್ರಸ್ತಾವನೆಯನ್ನು ರಾಜ್ಯ ಗೃಹ ಇಲಾಖೆಗೆ ಕಳುಹಿಸಲಾಗಿದೆ. ನಂತರ ಕಾನೂನು ಇಲಾಖೆಗೆ ರವಾನಿಸಿ ಅಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಅಂತಿಮವಾಗಿ ಬಿಹಾರ ಕ್ಯಾಬಿನೆಟ್‌ಗೆ ಹಸ್ತಾಂತರಿಸಿ ಅನುಮೋದನೆ ಪಡೆಯಲಿದೆ ಎಂದು ಹೇಳಲಾಗಿದೆ.
ಕೋರ್ಟ್‌ಗಳಲ್ಲಿ ರಾಶಿ ರಾಶಿ ಪ್ರಕಣಗಳು..
ಬಿಹಾರದಲ್ಲಿ ಮದ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯಗಳಲ್ಲಿ ರಾಶಿ ರಾಶಿ ಇವೆ. ಕಠಿಣ ನಿರ್ಬಂಧಗಳಿಂದ ಇಲ್ಲಿನ ಜೈಲುಗಳು ತುಂಬಿವೆ. ಹೀಗಾಗಿ, ಅಬಕಾರಿ ಇಲಾಖೆಗೆ ಸಂಬಂಧಿದ ಪ್ರಕರಣಗಳ ಇತ್ಯಾರ್ಥ ಹಾಗೂ ಆರೋಪಿಗಳ ಶಿಕ್ಷೆಯ ಸಡಿಲಿಕೆಗೆ ಸರ್ಕಾರ ಮುಂದಾಗಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ), ರಾಷ್ಟ್ರೀಯ ಜನತಾ ದಳ ಮತ್ತು ಹಿಂದೂಸ್ತಾನ್ ಅವಾಮಿ ಮೋರ್ಚಾ (ಎಚ್‌ಎಎಂ-ಎಸ್) ಮತ್ತು ಇತರ ನಾಯಕರು 'ಬಿಹಾರ ನಿಷೇಧ ಕಾನೂನು-2016' ಕಾಯ್ದೆ ಜಾರಿಯನ್ನು ಈ ಮೊದಲು ಖಂಡಿಸಿದ್ದರು.
ಮದ್ಯ ಸೇವನೆ ಕಡಿಮೆ ಮಾಡಲು ಕಾನೂನು ವಿಫಲವಾಗಿದೆ. ಬಿಹಾರದಲ್ಲಿ ಮದ್ಯ ಮಾಫಿಯಾಗಳು ಆಡಳಿತ ನಡೆಸುತ್ತಿವೆ. ಜೊತೆಗೆ ಹಣ ಗಳಿಸುತ್ತಿವೆ. ಜೈಲುಗಳು ಸಾಮಾನ್ಯ ಜನರಿಂದ ತುಂಬಿವೆ. ರಾಜ್ಯದಲ್ಲಿ ಮದ್ಯ ಸೇವನೆ ಸಂಬಂಧಿತ ಸಾವುಗಳು ಹೆಚ್ಚಿವೆ ಎಂದು ಕೆಲ ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದು, ಇದನ್ನು ಸೂಕ್ತವಾಗಿ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: ಬಿಹಾರದ ವೃದ್ಧ 11 ಸಾರಿಯಾದ್ರೇ, 5 ಬಾರಿ ಕೋವಿಡ್ ಡೋಸ್ ಪಡೆದು ಸಿಕ್ಕಿಬಿದ್ದ ಸಿವಿಲ್ ಸರ್ಜನ್