ಪಾಟ್ನಾ( ಬಿಹಾರ): ತೃತೀಯಲಿಂಗಿಗಳನ್ನು ಇಂದಿಗೂ ಸಮಾಜ ಬೇರೆಯದೇ ದೃಷ್ಟಿಕೋನದಿಂದ ನೋಡುತ್ತಿದೆ. ಈ ವರ್ಗದ ಬಹುತೇಕರು ಅವಮಾನವನ್ನು ಎದುರಿಸುತ್ತಲೇ ಇರುತ್ತಾರೆ. ಅಲ್ಲೊಬ್ಬರು, ಇಲ್ಲೊಬ್ಬರು ಸಮಾಜನ ನಿಂದನೆಯನ್ನು ಎದುರಿಸಿ ಸಾಧನೆಯ ಶಿಖರ ಏರಿದ್ದಾರೆ. ಅಂತಹದೇ ಒಂದು ಸುದ್ದಿ ಬಿಹಾರದಿಂದ ವರದಿಯಾಗಿದೆ. ಸಮಾಜ ನಿಂದನೆಯನ್ನೇ ಸವಾಲಾಗಿ ಸ್ವೀಕರಿಸಿ ಇತರರಿಗೆ ಸ್ಪೂರ್ತಿದಾಯಕವಾಗಿರುವ ಸುದ್ದಿಯೊಂದನ್ನು ನಿಮಗೆ ಪರಿಚಯಿಸುತ್ತೇವೆ.
ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್ ರೆಸ್ಟೋರೆಂಟ್ ಒಂದನ್ನು ತೆರೆಯಲಾಗಿದೆ, ಈ ರೆಸ್ಟೋರೆಂಟ್ ಅನ್ನು ತೃತೀಯಲಿಂಗಿಗಳೇ ನಡೆಸುತ್ತಾರೆ, ಈ ರೆಸ್ಟೋರೆಂಟ್‌ನಲ್ಲಿ ಮಾಣಿಯಿಂದ ಹಿಡಿದು ಅಡುಗೆ ಮಾಡುವವರೆಗೆ ತೃತೀಯಲಿಂಗಿಗಳೇ ಇದ್ದಾರೆ. ಇದರ ಹೆಸರನ್ನು ಸತ್ರಂಗಿ ದೋಸ್ತಾನ ರೆಸ್ಟೋರೆಂಟ್ ಎಂದು ಇಡಲಾಗಿದೆ.
ಬಿಹಾರದ ಮೊದಲ ಟ್ರಾನ್ಸ್‌ಜೆಂಡರ್ ರೆಸ್ಟೋರೆಂಟ್: ಪಾಟ್ನಾದ ಗಾಂಧಿ ಮೈದಾನದ ಮೋನಾ ಹಾಲ್‌ನ ಹಿಂಭಾಗದಲ್ಲಿರುವ ಸತ್ರಂಗಿ ದೋಸ್ತಾನಾ ರೆಸ್ಟೋರೆಂಟ್ ಈಗ ರಾಜ್ಯಾದ್ಯಂತ ಫೇಮಸ್ ಆಗಿದೆ. ವಿಶೇಷ ಎಂದರೆ ಇದನ್ನು ಟ್ರಾನ್ಸ್ಜೆಂಡರ್ಗಳೇ ನಡೆಸುತ್ತಿದ್ದಾರೆ. ಮೊದಲು ತೃತೀಯಲಿಂಗಿಗಳನ್ನು ಕಂಡರೆ ಗೇಲಿ ಮಾಡುತ್ತಿದ್ದವರು ಇಂದು ತೃತೀಯಲಿಂಗಿಗಳ ಆದರ ಆತಿಥ್ಯಕ್ಕೆ ಬೆರಗಾಗಿದ್ದಾರೆ. ಏಕೆಂದರೆ ಟ್ರಾನ್ಸ್‌ಜೆಂಡರ್ ಸಮುದಾಯದ ಜನರು ರೆಸ್ಟೋರೆಂಟ್‌ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅಡುಗೆ ಮಾಡುವುದರಿಂದ ಹಿಡಿದು ಆಹಾರ ಮತ್ತು ಅಕೌಂಟೆಂಟ್‌ಗಳವರೆಗೂ ತೃತೀಯ ಲಿಂಗಿಗಳೇ ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಸಹಾಯ: ಮಹಾನಗರ ಪಾಲಿಕೆಯ ಮೇಯರ್ ಸೀತಾ ಸಾಹು ಅವರು ಈ ರೆಸ್ಟೋರೆಂಟ್ ಯಶಸ್ವಿಯಾಗಿ ನಡೆಯಲು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈ ಬಗ್ಗೆ ಟ್ರಾನ್ಸ್ಜೆಂಡರ್ ಮುಖ್ಯಸ್ಥೆ ರೇಷ್ಮಾ ಸ್ವತಖ ಪಾಲಿಕೆ ಮೇಯರ್ ಕೊಡುಗೆಯನ್ನು ಹೊಗಳಿದ್ದಾರೆ. ರೆಸ್ಟೋರೆಂಟ್ ತೆರೆಯಲು ನಗರಸಭೆಯಿಂದ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಟ್ರಾನ್ಸ್‌ಜೆಂಡರ್‌ಗಳು ತಮ್ಮದೇ ಆದ ಫಂಡ್ ಕ್ರೋಢೀಕರಿಸುವ ಮೂಲಕ ಈ ರೆಸ್ಟೋರೆಂಟ್ ಅನ್ನು ತೆರೆದು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ತೃತೀಯಲಿಂಗಿ ಸಮುದಾಯದ ಜನರು ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವಾವಲಂಬಿಗಳಾಗಿ ಬದುಕಲು ನಿರ್ಧರಿಸಿದ್ದಾರೆ. ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಂಡು ಉತ್ತಮ ಜೀವನೋಪಾಯದ ದಾರಿ ಕಂಡುಕೊಂಡಿದ್ದಾರೆ.
"ಇದು ಬಿಹಾರದ ಮೊದಲ ಟ್ರಾನ್ಸ್‌ಜೆಂಡರ್ ರೆಸ್ಟೋರೆಂಟ್ ಮಾತ್ರವಲ್ಲ, ಜನರು ಟ್ರಾನ್ಸ್ಜೆಂಡರ್ಗಳ ಬಗ್ಗೆ ಉತ್ತಮವಾಗಿ ಯೋಚಿಸುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಮುಂಬರುವ ದಿನಗಳಲ್ಲಿ ಮುಜಾಫರ್‌ಪುರ ಸೇರಿ ಇತರ ಹಲವು ಜಿಲ್ಲೆಗಳಲ್ಲಿ ರೆಸ್ಟೋರೆಂಟ್‌ಗಳನ್ನು ತೆರೆಯುವ ಪ್ರಯತ್ನ ಮಾಡುತ್ತೇವೆ’’ ಎಂದು ಟ್ರಾನ್ಸ್‌ಜೆಂಡರ್ ಸಮುದಾಯದ ನಾಯಕಿ ರೇಷ್ಮಾ ಹೇಳಿದ್ದಾರೆ
ಬಿಹಾರ ಮತ್ತು ಜಾರ್ಖಂಡ್‌ನ ತೃತೀಯಲಿಂಗಿಗಳೇ ಇಲ್ಲಿ ಕೆಲಸಗಾರರು: ಸತ್ರಂಗಿ ದೋಸ್ತಾನಾ ರೆಸ್ಟೋರೆಂಟ್‌ನಲ್ಲಿ ಬಿಹಾರ ಮತ್ತು ಜಾರ್ಖಂಡ್‌ನ ಅನೇಕ ತೃತೀಯಲಿಂಗಿಗಳು ಕೆಲಸ ಮಾಡುತ್ತಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಆರ್ಡರ್ ತೆಗೆದುಕೊಳ್ಳುವವರಿಗೆ ಇಂಗ್ಲಿಷ್, ಹಿಂದಿ ಮತ್ತು ಬಂಗಾಳಿ ಭಾಷೆ ತಿಳಿದಿರುವುದು ಅಗತ್ಯ. ಈ ಭಾಷೆಗಳನ್ನು ಮಾತನಾಡುವ ಗ್ರಾಹಕರು ಯಾವುದೇ ತೊಡಕಿಲ್ಲದೇ ಈ ರೆಸ್ಟೋರೆಂಟ್ಗೆ ಭೇಟಿ ನೀಡಬಹುದು. ಅಲ್ಲಿನ ಸರ್ವರ್ಗಳು ಆಯಾಯ ಭಾಷೆಯಲ್ಲಿ ಸರ್ವಿಸ್ ನೀಡುತ್ತಾರೆ.
ಇಲ್ಲಿ ಸಿಗಲಿದೆ 200ಕ್ಕೂ ಹೆಚ್ಚು ಬಗೆಯ ಖಾದ್ಯಗಳು: ಸತ್ರಂಗಿ ದೋಸ್ತಾನ ರೆಸ್ಟೋರೆಂಟ್‌ನಲ್ಲಿ 20 ಜನ ತೃತೀಯಲಿಂಗಿಗಳು ಕೆಲಸ ಮಾಡ್ತಿದ್ದಾರೆ. ಬಿಹಾರಿ ಪಾಕಪದ್ಧತಿಯ 200 ಕ್ಕೂ ಹೆಚ್ಚು ಖಾಧ್ಯಗಳು ಅವರ ಮೆನುವಿನಲ್ಲಿದೆ. ಸತ್ರಂಗಿ ದೋಸ್ತಾನಾ ರೆಸ್ಟೋರೆಂಟ್‌ನಲ್ಲಿ ತ್ವರಿತ ಸರ್ವಿಸ್ ಕೂಡಾ ಸಿಗುತ್ತಿದೆ. ಲಿಟ್ಟಿ ಚೋಖಾ, ಪನೀರ್ ಪಾಯಾಜಾ, ಮಖಾನ್ ರೋಟಿ, ದಾಲ್ ಫ್ರೈ, ಪನೀರ್, ಟಿಕ್ಕಿ, ಕಟ್ಲೆಟ್, ಆಲೂ ಭಾಜಿ, ಚೌ ಮೇ, ಮಂಚೂರಿಯನ್, ಪಾಸ್ತಾ, ದೋಸೆ, ಇಡ್ಲಿ, ಪೋಹಾ ಸೇರಿದಂತೆ ಹಲವು ಖಾದ್ಯಗಳನ್ನು ಈ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.
ಹೇಗಿದೆ ಸತ್ರಂಗಿ ದೋಸ್ತಾನ ರೆಸ್ಟೋರೆಂಟ್?: ಎರಡು ಅಂತಸ್ತಿನಲ್ಲಿ ಈ ರೆಸ್ಟೋರೆಂಟ್ ಅನ್ನು ನಿರ್ಮಿಸಲಾಗಿದೆ. ಮೊದಲ ಮಹಡಿಯಲ್ಲಿ ಕುಳಿತು ಊಟ ಮಾಡಲು ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಹುಟ್ಟುಹಬ್ಬದ ಆಚರಣೆ, ನಿಶ್ಚಿತಾರ್ಥ ಅಥವಾ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ. ರೆಸ್ಟೋರೆಂಟ್ ಸಂಪೂರ್ಣ ಗ್ರಾಮೀಣ ವಾತಾವರಣದಲ್ಲಿ ನಿರ್ಮಾಣ ಮಾಡಲಾಗಿದೆ.
ಇದನ್ನು ಓದಿ: ಇಲ್ಲಿ ಮಾತಿಲ್ಲ, ಬರೀ ಮೌನವೇ ಎಲ್ಲ.. ವಾಕ್, ಶ್ರವಣ ದೋಷವುಳ್ಳವರಿಂದಲೇ ನಡೆಯುತ್ತಿದೆ ಈ ರೆಸ್ಟೋರೆಂಟ್!