ಪಶ್ಚಿಮ ಚಂಪಾರಣ್(ಬಿಹಾರ್): ಇಲ್ಲೊಬ್ಬ ಆಸಾಮಿ ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವಾಜ್ ಹಾಕಿ ಈಗ ಕಂಬಿ ಎಣಿಸುತ್ತಿದ್ದಾನೆ. ಬಿಹಾರದ ಪಶ್ಚಿಮ ಚಂಪಾರಣ್‌ನ ಶಿಕಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ, ತನ್ನನ್ನು ಬಂಧಿಸುವಂತೆ ಪೊಲೀಸರಿಗೆ ಕರೆ ಮಾಡಿ ಅವಾಜ್ ಹಾಕಿದ್ದ. ಆರೋಪಿ ಅಮರೇಶ್ ಕುಮಾರ್ ಸಿಂಗ್ ಬಂಧಿತ.
ಈತ ಪೊಲೀಸ್ ಠಾಣೆ ಸಂಖ್ಯೆಗೆ ಕರೆ ಮಾಡಿ, ನಾನು ಪತ್ರಕರ್ತ, ನಾನು ಕುಡಿದಿದ್ದೇನೆ, ನಿಮಗೆ ಧಮ್ ಇದ್ರೆ ಬಂಧಿಸಿ ಎಂದು ಕರೆಯಲ್ಲಿ ಹೇಳಿದ್ದ. ಕಾರ್ಯಪ್ರವೃತ್ತರಾದ ಪೊಲೀಸರು, ಆತನ ಮನೆಗೆ ಹೋಗಿ ಬಂಧಿಸಿದ್ದಾರೆ. ಈ ಬಗ್ಗೆ ಶಿಕಾರ್ಪುರ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಂಡನ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಹಲ್ಲೆ ಮಾಡಿ ಕೊಂದ ಪತ್ನಿ
'ನಾನು ಕುಡಿದಿದ್ದೇನೆ, ನಿಮಗೆ ಧಮ್ ಇದ್ರೆ ನನ್ನನ್ನು ಹಿಡಿಯಿರಿ.' ಎಂದು ಕುಡುಕ ಹೇಳಿದ್ದಕ್ಕೆ ಇದು ತಮಾಷೆ ಎಂದು ಭಾವಿಸಿ ಎಸ್‌ಎಚ್‌ಒ ಮೊದಲಿಗೆ ನಿರ್ಲಕ್ಷಿಸಿದ್ದರು. ಆದರೆ, ಆ ಕುಡುಕ ಪದೇ ಪದೇ ಕರೆ ಮಾಡಿ ಪೊಲೀಸರಿಗೆ ತಲೆ ನೋವು ಬರುವ ಹಾಗೆ ಮಾಡಿದ್ದನಂತೆ. ಬಿಹಾರ ಸರ್ಕಾರವು 2016 ರಲ್ಲಿ ಮದ್ಯ ನಿಷೇಧ ಕಾನೂನನ್ನು ಜಾರಿಗೆ ತಂದಿತ್ತು. ಕಾನೂನಿನ ಪ್ರಕಾರ ಮದ್ಯದ ಮಾರಾಟ, ಕುಡಿಯುವುದು ಮತ್ತು ತಯಾರಿಕೆಯನ್ನು ನಿಷೇಧಿಸಲಾಗಿದೆ. ಆದ್ರೆ, 2018 ರಲ್ಲಿ ತಿದ್ದುಪಡಿಯ ನಂತರ ಕಾನೂನನ್ನು ಸಡಿಲಗೊಳಿಸಲಾಗಿದೆ.