ಗಯಾ: ಬಿಹಾರದಲ್ಲಿ ಮಹಾಮೈತ್ರಿಕೂಟ ಸರ್ಕಾರ ರಚನೆಯಾದಾಗಿನಿಂದ ಬಿಜೆಪಿ ಹಾಗು ನಿತೀಶ್ ಕುಮಾರ್ ಸಂಬಂಧ ಹಳಸಿದೆ. ಅವಕಾಶ ಸಿಕ್ಕಾಗಲೆಲ್ಲ ಒಬ್ಬರ ಮೇಲೊಬ್ಬರು ಟೀಕಾಸ್ತ್ರ ಪ್ರಯೋಗಿಸುತ್ತಿರುತ್ತಾರೆ. ಇದೀಗ ರಾಜ್ಯದಲ್ಲಿ ಹೊಸ ವಿವಾದ ಉಂಟಾಗಿದೆ. ಮುಸ್ಲಿಂ ಸಮುದಾಯದ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಅವರು ಗಯಾದ ವಿಷ್ಣುಪಾದ್ ದೇವಸ್ಥಾನದೊಳಗೆ ಪ್ರವೇಶಿಸಿರುವುದು ಅಲ್ಲಿನ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ.
ವಿಷ್ಣುಪಾದ್ ದೇವಸ್ಥಾನಕ್ಕೆ ಸಿಎಂ ನಿತೀಶ್ ಕುಮಾರ್ ಭೇಟಿ: ದೇಗುಲಕ್ಕೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಇಲ್ಲಿನ ಪ್ರಸಿದ್ಧ ವಿಷ್ಣುಪಾದ್ ದೇವಾಲಯದ ಮುಖ್ಯದ್ವಾರದ ಮೇಲೆ ಬರೆಯಲಾಗಿದೆ. ಸೋಮವಾರ, ಬಿಹಾರ ಸಿಎಂ ನಿತೀಶ್ ಕುಮಾರ್ ಗಯಾ ಪ್ರವಾಸಕ್ಕೆ ಕೈಗೊಂಡಿದ್ದರು. ವಿಷ್ಣುಪಾದ್ ದೇವಸ್ಥಾನಕ್ಕೆ ತೆರಳಿದ ಸಿಎಂ ಗರ್ಭಗುಡಿಯೊಳ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ಬಿಹಾರದ ಶೇ. 72ರಷ್ಟು ಸಚಿವರಿಗೆ ಕ್ರಿಮಿನಲ್ ಹಿನ್ನೆಲೆ, 17 ಮಂತ್ರಿಗಳ ವಿರುದ್ಧ ಗಂಭೀರ ಪ್ರಕರಣ
ದೇಗುಲದೊಳಗೆ ಸಚಿವ ಮನ್ಸೂರಿ ಪ್ರವೇಶ: ದೇವಸ್ಥಾನದ ಗರ್ಭಗುಡಿಯಲ್ಲಿ ಸಿಎಂ ನಿತೀಶ್ ಕುಮಾರ್ ಪೂಜೆ ಸಲ್ಲಿಸುವಾಗ ಪಕ್ಷದ ನಾಯಕರು, ಕಾರ್ಯಕರ್ತರು, ಬಿಹಾರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಮತ್ತು ಗಯಾ ಜಿಲ್ಲಾ ಉಸ್ತುವಾರಿ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಸೇರಿದಂತೆ ಇತರರು ಹಾಜರಿದ್ದರು. ಈ ಘಟನೆ ಬಿಹಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೈತ್ರಿಕೂಟ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ: ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ವಾಗ್ದಾಳಿ ನಡೆಸಿ, "ಬೇರೆ ಧರ್ಮದವರು ದೇಗುಲ ಪ್ರವೇಶಿಸುವಂತಿಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಮುಖ್ಯಮಂತ್ರಿಯಿಂದ ಕೋಟಿಗಟ್ಟಲೆ ಸನಾತನರು ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಪಹರಣ ಪ್ರಕರಣದ ಆರೋಪಿಗೆ ಬಿಹಾರದ ನಿತೀಶ್ ಸಂಪುಟದಲ್ಲಿ ಕಾನೂನು ಸಚಿವ ಸ್ಥಾನ
ಸಚಿವ ಮನ್ಸೂರಿ ಪ್ರತಿಕ್ರಿಯೆ: ನಿತೀಶ್ ಕುಮಾರ್ ಅವರೊಂದಿಗೆ ವಿಷ್ಣುಪಾದ ದೇವಸ್ಥಾನಕ್ಕೆ ಭೇಟಿ ನೀಡುವ ಭಾಗ್ಯ ಸಿಕ್ಕಿತು. ಇದರಿಂದಾಗಿ ನನಗೆ ಅದೃಷ್ಟ ಒಲಿದು ಬಂತು ಎಂದು ಸಚಿವ ಮನ್ಸೂರಿ ಹೇಳಿದ್ದಾರೆ. ದರ್ಶನದ ಚಿತ್ರ ಮತ್ತು ವಿಡಿಯೋ ಮಾಹಿತಿಯನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿ ಒದಗಿಸಿದ್ದಾರೆ.
ಸಭೆ ನಡೆಸಿ ಕ್ರಮ: ವಿಷ್ಣುಪಾದ್ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಗಜಧರ್ ಲಾಲ್ ಪಾಠಕ್ ಮಾತನಾಡಿ, "ಇದುವರೆಗೂ ಈ ರೀತಿ ಆಗಿಲ್ಲ. ದೇವಸ್ಥಾನದಲ್ಲಿ ಹಿಂದೂಯೇತರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಸಂಪ್ರದಾಯ ಮೊದಲಿನಿಂದಲೂ ನಡೆಯುತ್ತಿದೆ. ದೇವಾಲಯವನ್ನು ಇಂದೋರ್‌ನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಸ್ಥಾಪಿಸಿದ್ದರು. ಹಿಂದೂ ಪ್ರವೇಶ ಸಂಪ್ರದಾಯ ಪಾಲಿಸದ ಕುರಿತು ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ" ಎಂದರು.
ಇದನ್ನೂ ಓದಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ