ನವದೆಹಲಿ: ಭಾರತೀಯ ಕಿಸಾನ್ ಸಂಘ (BKS) ಗೆ ಸೇರಿದ ರೈತರು ರಾಷ್ಟ್ರ ರಾಜಧಾನಿಯ ರಾಮ್‌ಲೀಲಾ ಮೈದಾನದಲ್ಲಿ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (MSP) ಒತ್ತಾಯಿಸಿ ಕಿಸಾನ್ ಗರ್ಜನಾ ಪ್ರತಿಭಟನಾ ರ್‍ಯಾಲಿ ಆರಂಭಿಸಿದ್ದಾರೆ.
ದೇಶದಾದ್ಯಂತದ 560 ಜಿಲ್ಲೆಗಳ 60 ಸಾವಿರ ಗ್ರಾಮ ಸಮಿತಿಗಳಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರು ಕಿಸಾನ್ ಗರ್ಜನಾ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ರಾಮಲೀಲಾ ಮೈದಾನಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ 'ಜನ ಜಾಗರಣ' ಕಾರ್ಯಕ್ರಮದ ಭಾಗವಾಗಿ ರೈತರು ರಾಮಲೀಲಾ ಮೈದಾನ ತಲುಪಲಿದ್ದಾರೆ ಎಂದು ಬಿಕೆಎಸ್ ಅಧಿಕೃತ ಪ್ರಕಟಣೆ ತಿಳಿಸಿದೆ.
ಕಳೆದ 4 ತಿಂಗಳು ಅವಧಿಯಲ್ಲಿ ಬಿಕೆಎಸ್, ದಕ್ಷಿಣ ರಾಜ್ಯ ತೆಲಂಗಾಣ ಮತ್ತು ಮಧ್ಯಪ್ರದೇಶಗಳಲ್ಲಿ ಬೃಹತ್ ಸಭೆಗಳನ್ನು ಒಳಗೊಂಡಂತೆ ಸುಮಾರು 20,000 ಕಿಮೀ ಪಾದಯಾತ್ರೆ, 13,000 ಕಿಮೀ ಸೈಕಲ್ ರ್ಯಾಲಿಗಳು ಮತ್ತು 18,000 ಬೀದಿ ಸಭೆಗಳನ್ನು ನಡೆಸಿದೆ. ಅದರ ಮುಂದಿನ ಹಂತವಾಗಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಬಿಕೆಎಸ್‌ನ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ರಾಘವೇಂದ್ರ ಪಟೇಲ್ ಮಾಧ್ಯಮಕ್ಕೆ ತಿಳಿಸಿದರು.
ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈ ರ್ಯಾಲಿ ನಡೆಯುತ್ತಿದೆ. ಬೇಡಿಕೆಗಳು ಹೀಗಿವೆ: ಮೊದಲನೆಯದಾಗಿ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆಯನ್ನು ಜಾರಿಗೊಳಿಸಬೇಕು ಮತ್ತು ಅದು ಸಿಗುವಂತೆ ಖಾತ್ರಿ ಪಡಿಸಬೇಕು. ಎರಡನೆಯದಾಗಿ, ಎಲ್ಲಾ ರೀತಿಯ ಕೃಷಿ ಉತ್ಪನ್ನಗಳ ಮೇಲೆ ಜಿಎಸ್‌ಟಿ ರದ್ದುಗೊಳಿಸಬೇಕು. ಮೂರನೆಯದಾಗಿ, ಕೇಂದ್ರ ವಲಯದ ಯೋಜನೆಯಾದ 'ಕಿಸಾನ್ ಸಮ್ಮಾನ್ ನಿಧಿ'ಯಲ್ಲಿ ಗಣನೀಯ ಹೆಚ್ಚಳವಾಗಬೇಕು. ನಾಲ್ಕನೆಯದಾಗಿ, ತಳೀಯವಾಗಿ ಮಾರ್ಪಡಿಸಿದ (GM) ಬೆಳೆಗಳಿಗೆ ಅನುಮತಿಯನ್ನು ಹಿಂಪಡೆಯಬೇಕು ಎಂದು ಪಟೇಲ್ ಮಾಹಿತಿ ನೀಡಿದರು.
ಇದನ್ನೂ ಓದಿ: ರೈತರ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಲಾಗಿದೆ: ಕೇಂದ್ರ ಕೃಷಿ ಸಚಿವರ ಮಾಹಿತಿ