ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರು 'ರಾಷ್ಟ್ರವ್ಯಾಪಿ ವರ್ಚುವಲ್ ಪರೇಡ್' ಉದ್ಘಾಟಿಸಿ ಆನಂತರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಭಾನುವಾರ ಆಯೋಜಕರು ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ವೀಕ್ಷಕರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ವರ್ಚುವಲ್ ಪರೇಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಯುಎಸ್ ಕ್ಯಾಪಿಟೋಲ್ ಬಿಲ್ಡಿಂಗ್ನ ಪಶ್ಚಿಮ ದಿಕ್ಕಿನ ಮುಂಭಾಗದಲ್ಲಿ ಜನವರಿ 20 ರಂದು ನಡೆಯಲಿರುವ 'ರಾಷ್ಟ್ರವ್ಯಾಪಿ ವರ್ಚುವಲ್ ಪರೇಡ್' ಉದ್ಘಾಟನೆಯ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬೈಡನ್ ಮತ್ತು ಅವರ ಪತ್ನಿ ಪ್ರಥಮ ಮಹಿಳೆ ಜಿಲ್ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ನಿಯೋಜಿತರಾದ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಭಾಗವಹಿಸಲಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ನಂತರ ಗಣ್ಯರು ಸಾಮಾಜಿಕ ಅಂತರದೊಂದಿಗೆ ಕ್ಯಾಪಿಟೋಲ್ ಬಿಲ್ಡಿಂಗ್ನ ಮತ್ತೊಂದು ದಿಕ್ಕಿನ ಮುಂಭಾಗದಲ್ಲಿ ಮಿಲಿಟರಿ ಪರೇಡ್ ವೀಕ್ಷಿಸಲಿದ್ದಾರೆ. ಈ ಪರೇಡ್ ಮಿಲಿಟರಿಯ ಸಂಪ್ರದಾಯಗಳಾಗಿದ್ದು, ಈ ಸಂದರ್ಭದಲ್ಲಿ ಬೈಡನ್ ಮಿಲಿಟರಿ ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸುತ್ತಾರೆ.