ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಕೇಂದ್ರದ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಶೂನ್ಯ ಬಜೆಟ್ ಕೃಷಿ, ಹರ್ ಘರ್ ಜಲ್ ಯೋಜನೆ ಸೇರಿದಂತೆ ಕೆಲವು ಕೊಡುಗೆಗಳನ್ನು ದೇಶದ ಗ್ರಾಮೀಣ ಭಾಗಕ್ಕೆ ನೀಡಿದ್ದಾರೆ.
2024 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ 'ಹರ್ ಘರ್ ಜಲ್' (ಪ್ರತಿ ಮನೆಗೂ ಕೊಳವೆ ನೀರು ಸರಬರಾಜು) ನೀಡಲು ಜಲ ಜೀವನ್ ಮಿಷನ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ. ಅಲ್ಲದೇ ಜಲ ಸಂಪನ್ಮೂಲ ಮತ್ತು ನೀರು ಸರಬರಾಜಿನ ನಿರ್ವಹಣೆಯನ್ನು ಸಮಗ್ರ ರೀತಿಯಲ್ಲಿ ಮಾಡಲು 'ಹೊಸ ಜಲ ಶಕ್ತಿ ಮಂತ್ರಾಲಯ' ಯೋಜನೆಯನ್ನು ಜಾರಿಗೊಳಿಸಲಿದೆ. ಜಲ್ ಶಕ್ತಿ ಅಭಿಯಾನಕ್ಕಾಗಿ ದೇಶದ 256 ಜಿಲ್ಲೆಗಳಾದ್ಯಂತ 1592 ನಿರ್ಣಾಯಕ ಮತ್ತು ಹೆಚ್ಚು ಶೋಷಿತ ಬ್ಲಾಕ್ಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಶೂನ್ಯ ಬಜೆಟ್ ಕೃಷಿ:
ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಈಗಾಗಲೇ ಕೆಲವು ರಾಜ್ಯಗಳಲ್ಲಿ ಶೂನ್ಯ ಬಜೆಟ್ ಕೃಷಿಯಡಿ ತರಬೇತಿ ಹೊಂದಿದ ರೈತರನ್ನು ಇತರ ರಾಜ್ಯಗಳಲ್ಲಿ ಪುನರಾವರ್ತಿಸಲು ತೀರ್ಮಾನಿಸಿದೆ.
ಇನ್ನು, ಕೃಷಿ-ಗ್ರಾಮೀಣ ಉದ್ಯಮ ಕ್ಷೇತ್ರಗಳಲ್ಲಿ 75,000 ಉದ್ಯಮಿಗಳನ್ನು ನುರಿತರನ್ನಾಗಿಸುವುದು, ರೈತರಿಗೆ ಆರ್ಥಿಕತೆಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು 10,000 ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು ರಚನೆ ಹಾಗೂ ರೈತರು ಇ-ನ್ಯಾಮ್‌ನಿಂದ ಲಾಭ ಪಡೆಯಲು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಕೆಲಸ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ.