ನವದೆಹಲಿ: 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೀಡಾಗಿದ್ದ ನಾಲ್ವರಲ್ಲಿ ಕಿರಿಯನಾಗಿರುವ ವಿನಯ್ ಶರ್ಮಾ ಅತ್ಯಂತ ಆತಂಕಕ್ಕೊಳಗಾಗಿದ್ದಾನೆ ಎಂಬುದನ್ನ ಅವನ ನಡವಳಿಕೆ ತೋರುತ್ತಿದೆ ಎಂದು ತಿಹಾರ್ ಜೈಲಿನ ಮೂಲಗಳು ತಿಳಿಸಿವೆ.
7 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿನಯ್, ಅಕ್ಷಯ್ ಕುಮಾರ್ ಸಿಂಗ್ (31), ಮುಖೇಶ್ ಕುಮಾರ್ ಸಿಂಗ್ (32) ಮತ್ತು ಪವನ್ ಗುಪ್ತಾ (25) ಈ ನಾಲ್ವರಲ್ಲಿ 26 ವರ್ಷ ವಯಸ್ಸಿನ ವಿನಯ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗರಿಷ್ಠ ಶಿಕ್ಷೆಗೆ ಈಡಾಗಿದ್ದಾನೆ. ಜನವರಿ 22 ರಂದು ಇವರನ್ನು ಗಲ್ಲಿಗೇರಿಸುವುದು ನಿರ್ಧಾರವಾಗಿತ್ತು. ಆದರೆ, ಅಪರಾಧಿ ಮುಖೇಶ್ ಕ್ಷಮಾದಾನ ಮನವಿ ಸಲ್ಲಿಸಿರುವುದರಿಂದ ಮರಣದಂಡನೆ ನಿಗಧಿ ಪಡಿಸಿರುವ ದಿನ ನಡೆಯುವುದಿಲ್ಲ ಎಂದು ದೆಹಲಿ ಸರ್ಕಾರ ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.
ತಿಹಾರ್ ಜೈಲಿನಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದ ವಿನಯ್, ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಈವರೆಗೂ 11 ಬಾರಿ, ಪವನ್ 8 ಬಾರಿ, ಮುಖೇಶ್ 3 ಬಾರಿ ಮತ್ತು ಅಕ್ಷಯ್ 1 ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಶಿಕ್ಷೆ ಕುಟುಂಬದ ಭೇಟಿಯ ಹಕ್ಕುಗಳನ್ನು ಮೊಟಕುಗೊಳಿಸುವುದರಿಂದ ಹಿಡಿದು ಹೆಚ್ಚು ಗಂಭೀರವಾದ ಶಿಕ್ಷೆಗಳನ್ನೂ ಒಳಗೊಂಡಿರುತ್ತವೆ ಎಂದು ಮೂಲಗಳು ವಿವರಿಸಿದೆ.
ಅಪರಾಧಿಗಳು ಉತ್ತಮ ಮಾನಸಿಕ ಸ್ಥಿತಿಯಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಲು ಜೈಲು ಅಧಿಕಾರಿಗಳು ಪ್ರತಿದಿನ ಅಪರಾಧಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದಾರೆ.
2015 ರಲ್ಲಿ, ವಿನಯ್ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದರೂ ಕೂಡ ಉತ್ತೀರ್ಣರಾಗಲಿಲ್ಲ. ಹಾಗೇ ಮುಖೇಶ್, ಪವನ್ ಮತ್ತು ಅಕ್ಷಯ್ ಅವರೂ 2016 ರಲ್ಲಿ 10 ನೇ ತರಗತಿಗೆ ಪ್ರವೇಶ ಪಡೆದು ಪರೀಕ್ಷೆಗೆ ಹಾಜರಾದರು. ಆದರೆ, ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಶಿಕ್ಷೆಯ ಅವಧಿಯಲ್ಲಿ ಅವರು ಜೈಲಿನೊಳಗೆ ಈ ವರೆಗೂ ದುಡಿದಿರುವ ಹಣವನ್ನು ಅವರ ಕುಟುಂಬದವರಿಗೆ ತಲುಪಿಸಲಾಗುತ್ತದೆ. ಆದರೆ, ಇಲ್ಲೂ ಕೂಡ ವಿನಯ್ ಯಾವುದೇ ಕೆಲಸದಲ್ಲಿ ತೊಡಗಿಕೊಂಡು ಹಣ ಗಳಿಸಿಲ್ಲ ಎಂದು ತಿಳಿದು ಬಂದಿದೆ.
ನಾಲ್ವರು ಅಪರಾಧಿಗಳ ಕುಟುಂಬಕ್ಕೆ ವಾರಕ್ಕೆ ಎರಡು ಬಾರಿ ಅವರನ್ನು ಭೇಟಿ ಮಾಡಲು ಅವಕಾಶವಿದೆ. ವಿನಯ್ ತಂದೆ ಮಂಗಳವಾರ ಆತನನ್ನು ಭೇಟಿಯಾಗಲು ಬಂದಿದ್ದರು ಮತ್ತು ಮುಖೇಶ್ ತಾಯಿ ಆಗಾಗ ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಪವನ್ ಕುಟುಂಬಸ್ಥರು ಆತನನ್ಉ ಜನವರಿ 7ಕ್ಕೆ ಕೊನೆಯದಾಗಿ ಭೇಟಿ ಮಾಡಿದ್ದರು. ಇನ್ನೂ ಅಕ್ಷಯ್ ಕುಟುಂಬ ನವೆಂರ್ನಲ್ಲಿ ಆತನನ್ನು ಭೇಟಿಯಾಗಿತ್ತು. ಆದರೆ, ಮರಣದಂಡನೆಯ ತೀರ್ಪಿನ ನಂತರ ಈಚೆ ಬಂದಿಲ್ಲ. ಗಲ್ಲಿಗೂ ಮೊದಲು ಅಪರಾಧಿಗಳು ತಮ್ಮ ಕುಟುಂಬಸ್ಥರನ್ನು ಯಾವಾಗ ಭೇಟಿ ಮಾಡ ಬಯಸುತ್ತಾರೆ ಎಮದು ಕೇಳಲಾಗಿದೆ. ಆದರೆ, ಇನ್ನೂ ಯಾರೂ ಪ್ರತಿಕ್ರಿಯಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 13 ರಂದು, ಜೈಲು ಅಧಿಕಾರಿಗಳ ತಂಡವು ನಾಲ್ಕು ಅಪರಾಧಿಗಳ ಪ್ರತಿಕೃತಿಗೆ ನಕಲಿ ಮರಣದಂಡನೆ ನಡೆಸಿತು. ಅಪರಾಧಿಗಳ ತೂಕಕ್ಕೆ ಅನುಗುಣವಾಗಿ ಅವಶೇಷಗಳು ಮತ್ತು ಕಲ್ಲುಗಳಿಂದ ತುಂಬಿದ ಚೀಲಗಳನ್ನು ಬಳಸಿ ಪ್ರತಿಕೃತಿಗಳನ್ನು ತಯಾರಿಸಲಾಗಿತ್ತು.