ನವದೆಹಲಿ: ಮೋದಿ ಸರ್ಕಾರದ ಎರಡನೇ ಅವಧಿಯ ಒಂದು ವರ್ಷವು ಸಾಧನೆ ಮತ್ತು ಊಹಿಸಲಾಗದ ಸವಾಲುಗಳ ವರ್ಷವಾಗಿದೆ. ಈ ಸವಾಲುಗಳನ್ನು ದಿಟ್ಟ ಮತ್ತು ಸಮಯೋಚಿತ ನಿರ್ಧಾರಗಳಿಂದ ಎದುರಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಹೇಳಿದ್ದಾರೆ.
ಮೋದಿ 2.0 ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮುಂದೆ ನಿಂತು ನಮ್ಮನ್ನು ಮುನ್ನಡೆಸಿದರು. ಮಾರಣಾಂತಿಕ ಸೋಂಕನ್ನು ಎದುರಿಸಲು ಜನರನ್ನು ಒಳಗೊಳ್ಳುವ ದಿಟ್ಟ ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಂಡರು. ಅನೇಕ ಶಕ್ತಿಶಾಲಿ ದೇಶಗಳು ಕೋವಿಡ್-19 ವಿರುದ್ಧ ಅಸಹಾಯಕರಾಗಿ ಕಂಡುಬಂದರೂ, ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ದೇಶದಲ್ಲಿ ಪ್ರತಿದಿನ 4.5 ಲಕ್ಷ ಪಿಪಿಇ ಕಿಟ್‌ಗಳು ಮತ್ತು 58 ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸಲಾಗುತ್ತಿದೆ. ಲಾಕ್‌ಡೌನ್‌ನ ನಿರ್ಧಾರವನ್ನು ಸಮಯೋಚಿತವೆಂದು ನಡ್ಡಾ ಶ್ಲಾಘಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ರದ್ದುಪಡಿಸುವುದು, ಭಯೋತ್ಪಾದನಾ-ವಿರೋಧಿ ಕಾನೂನುಗಳನ್ನು ಬಲಪಡಿಸುವುದು, ಬ್ಯಾಂಕ್ ವಿಲೀನದಂತ ದಿಟ್ಟ ನಿರ್ಧಾರಗಳು ದೇಶವನ್ನು ಬಲಪಡಿಸಲು ಮತ್ತು 'ಒಂದು ರಾಷ್ಟ್ರ, ಒಂದು ಸಂವಿಧಾನ'ದ ಉದ್ದೇಶವನ್ನು ಸಾಕಾರಗೊಳಿಸಲು ನೆರವಾದವು ಎಂದು ಹೇಳಿದರು.
ಅಯೋಧ್ಯೆ ಪ್ರಕರಣದ ನಿರ್ಧಾರವನ್ನು ವಿಳಂಬಗೊಳಿಸಲು ಕಾಂಗ್ರೆಸ್ ದೀರ್ಘಕಾಲ ಶ್ರಮಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರವು ದೇವಾಲಯ ನಿರ್ಮಾಣಕ್ಕೆ ಟ್ರಸ್ಟ್ ರಚಿಸಿದ್ದರಿಂದ, ಈಗ ಭವ್ಯ ರಾಮ ಮಂದಿರ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.