ಹೈದರಾಬಾದ್: ಅಂಗ ದಾನ ಮಾಡುವ ಯಾವುದೇ ವ್ಯಕ್ತಿಯು ಎಂಟು ಜೀವಗಳನ್ನು ಉಳಿಸಬಹುದು ಮತ್ತು ಅಂಗಾಂಶ ದಾನದಿಂದ 50 ಜನರ ಜೀವನವನ್ನು ಸುಧಾರಿಸಬಹುದು. ಅಂಗಾಂಗ ದಾನವು ಮಾನವೀಯತೆಯ ಹೆಸರಿನಲ್ಲಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ತೀರಿಕೊಂಡ ನಂತರ ಅಂಗಗಳ ಉಪಯೋಗವಿರುವುದಿಲ್ಲ. ಆ ಅಂಗಗಳು ಬೇರೊಬ್ಬರಿಗೆ ಹೊಸ ಜೀವನವನ್ನು ನೀಡಬಹುದು. ಅಂಗಾಂಗ ದಾನಕ್ಕೆ ಸಂಬಂಧಿಸಿದ ಅನೇಕ ಮೂಢನಂಬಿಕೆಗಳಿವೆ. ಆದರೆ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಪ್ರೋತ್ಸಾಹಿಸಲು ಪ್ರತಿ ವರ್ಷ ಆಗಸ್ಟ್ 13 ರಂದು ವಿಶ್ವ ಅಂಗಾಂಗ ದಾನ ದಿನವನ್ನು ಆಚರಿಸಲಾಗುತ್ತದೆ.
ಒಂದು ಸಮೀಕ್ಷೆಯ ಪ್ರಕಾರ, ಅಂಗಗಳು ಲಭ್ಯವಿಲ್ಲದ ಕಾರಣ ಪ್ರತಿವರ್ಷ ಸುಮಾರು 5,00,000 ಜನರು ಸಾಯುತ್ತಾರೆ. ಈ ಕುರಿತು ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ (ಎನ್‌ಎಚ್‌ಪಿ) ಹೇಳಿರುವ ಕೆಲವು ಸಂಗತಿಗಳು ಇಲ್ಲಿವೆ :
- ವಯಸ್ಸು, ಜಾತಿ, ಧರ್ಮ, ಸಮುದಾಯ ಇತ್ಯಾದಿಗಳನ್ನು ಲೆಕ್ಕಿಸದೆ ಯಾರಾದರೂ ಅಂಗ ದಾನಿಯಾಗಬಹುದು
- ಅಂಗಗಳನ್ನು ದಾನ ಮಾಡಲು ಯಾವುದೇ ನಿರ್ದಿಷ್ಟ ವಯಸ್ಸು ಇಲ್ಲ. ಅಂಗಗಳನ್ನು ದಾನ ಮಾಡುವ ನಿರ್ಧಾರವು ವಯಸ್ಸನ್ನಲ್ಲ, ಕಠಿಣ ವೈದ್ಯಕೀಯ ಮಾನದಂಡಗಳನ್ನು ಆಧರಿಸಿದೆ
- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಾದರೂ ದಾನಿಯಾಗಲು ಪೋಷಕರ ಸಮ್ಮತಿ ಇರಬೇಕು
- ಕ್ಯಾನ್ಸರ್, ಎಚ್‌ಐವಿ, ಮಧುಮೇಹ, ಮೂತ್ರಪಿಂಡ ಕಾಯಿಲೆ ಅಥವಾ ಹೃದ್ರೋಗ ಅಥವಾ ಗಂಭೀರ ಅನಾರೋಗ್ಯ ಸ್ಥಿತಿಯನ್ನು ಹೊಂದಿರುವವರು ಅಂಗಾಂಗ ದಾನ ಮಾಡಬಾರದು
ಯಾವ ಅಂಗಾಂಗ ದಾನ ಮಾಡಬಹುದು?
ನೈಸರ್ಗಿಕ ಸಾವಿನ ಸಂದರ್ಭದಲ್ಲಿ:
- ಕಾರ್ನಿಯಾದಂತಹ ಅಂಗಾಂಶಗಳು
- ಹೃದಯ ಕವಾಟಗಳು
- ಚರ್ಮ
- ಮೂಳೆ
ಮೆದುಳಿನ ಸಾವಿನ ಸಂದರ್ಭದಲ್ಲಿ:
- ಹೃದಯ
- ಯಕೃತ
- ಮೂತ್ರಪಿಂಡಗಳು
- ಕರುಳು
- ಶ್ವಾಸಕೋಶ
- ಮೇದೋಜ್ಜೀರಕ ಗ್ರಂಥಿ
ಯಶಸ್ವಿ ಕಸಿ ನಂತರ ಕೈ ಮತ್ತು ಮುಖವನ್ನು ಸಹ ಇತ್ತೀಚೆಗೆ ಅಂಗಾಂಗ ದಾನಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ದಾನವನ್ನು ಸತ್ತ ವ್ಯಕ್ತಿಯಿಂದ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ, ಜೀವಂತ ಅಂಗ ದಾನವನ್ನೂ ಸಹ ಮಾಡಲಾಗುತ್ತದೆ. ಜೀವಂತ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ, ಒಬ್ಬರು ಒಂದು ಅಂಗಾಂಗವನ್ನು ದಾನ ಮಾಡಬಹುದು:
- ಒಂದು ಮೂತ್ರಪಿಂಡ
- ಒಂದು ಶ್ವಾಸಕೋಶ
- ಯಕೃತಿನ ಒಂದು ಭಾಗ
- ಮೇದೋಜ್ಜೀರಕ ಗ್ರಂಥಿಯ ಒಂದು ಭಾಗ
- ಕರುಳಿನ ಒಂದು ಭಾಗ
ಕೆಲವು ಸಾಮಾನ್ಯ ಮೂಢನಂಬಿಕೆಗಳು:
- ಯಾವುದಾದರು ಅನಾರೋಗ್ಯ ಹೊಂದಿದ್ದರೆ ದಾನಿಯಾಗಲು ಸಾಧ್ಯವಿಲ್ಲ: ವಯಸ್ಸು ಮತ್ತು ವೈದ್ಯಕೀಯ ಸ್ಥಿತಿಯನ್ನು ಲೆಕ್ಕಿಸದೆ ಯಾರಾದರೂ ದಾನಿಗಳಾಗಿ ನೋಂದಾಯಿಸಿಕೊಳ್ಳಬಹುದು. ಅಂಗಾಂಗ ದಾನ ಪ್ರಕ್ರಿಯೆಯನ್ನು ಕೈಗೊಳ್ಳಬಹುದೇ ಎಂದು ವೈದ್ಯಕೀಯ ತಂಡವು ನಿರ್ಧರಿಸುತ್ತದೆ.
- ಅಂಗ ದಾನಕ್ಕಾಗಿ ದಾನಿಗಳ ಕುಟುಂಬಕ್ಕೆ ಶುಲ್ಕ ವಿಧಿಸಲಾಗುತ್ತದೆ: ಅಂಗ ದಾನ ಪ್ರಕ್ರಿಯೆಗೆ ದಾನಿಗಳ ಕುಟುಂಬಕ್ಕೆ ಎಂದಿಗೂ ಶುಲ್ಕ ವಿಧಿಸಲಾಗುವುದಿಲ್ಲ.
- ಅಂಗಗಳನ್ನು ದಾನ ಮಾಡಲು ನಾನು ತುಂಬಾ ಚಿಕ್ಕವನು: ಒಬ್ಬ ವ್ಯಕ್ತಿಯು ಅವರ ವಯಸ್ಸನ್ನು ಲೆಕ್ಕಿಸದೆ ದಾನಿಯಾಗಬಹುದು. ಆದಾಗ್ಯೂ, ವ್ಯಕ್ತಿಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಪೋಷಕರ ಅಥವಾ ಕಾನೂನು ಪಾಲಕರ ಒಪ್ಪಿಗೆ ಅತ್ಯಗತ್ಯ.
- ನನಗೆ ತುಂಬಾ ವಯಸ್ಸಾಗಿದೆ/ ದುರ್ಬಲವಾಗಿದ್ದೇನೆ/ಉತ್ತಮ ಆರೋಗ್ಯದಲ್ಲಿಲ್ಲ, ನನ್ನ ಅಂಗಗಳನ್ನು ಯಾರೂ ಬಯಸುವುದಿಲ್ಲ: ಮೊದಲೇ ಹೇಳಿದಂತೆ, ಒಬ್ಬ ವ್ಯಕ್ತಿಯು ಅವರ ವಯಸ್ಸನ್ನು ಲೆಕ್ಕಿಸದೆ ಅಂಗಾಂಗ ದಾನ ಮಾಡಬಹುದು. ನಿಮ್ಮ ಅಂಗಗಳು ಕಸಿ ಮಾಡಲು ಸೂಕ್ತವಾದುದೋ ಅಥವಾ ಇಲ್ಲವೋ ಎಂದು ತಜ್ಞರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಿಂದ ನಿಮ್ಮನ್ನು ಅಕಾಲಿಕವಾಗಿ ಅನರ್ಹಗೊಳಿಸಬೇಡಿ.
ದೇಹವನ್ನು ವಿರೂಪಗೊಳಿಸದೆ ತಜ್ಞರು ನಡೆಸುವ ಪ್ರಕ್ರಿಯೆ ಇದು. ಆದ್ದರಿಂದ, ಅಂಗಗಳನ್ನು ದಾನ ಮಾಡುವುದು ಮತ್ತು ಯಾರಿಗಾದರೂ ಹೊಸ ಜೀವನವನ್ನು ಉಡುಗೊರೆಯಾಗಿ ನೀಡುವುದು ಯಾರಾದರೂ ಮಾಡಬಹುದಾದ ಅತ್ಯುತ್ತಮ ಕಾರ್ಯಗಳಲ್ಲಿ ಒಂದಾಗಿದೆ.