ನವದೆಹಲಿ : ಕೊರೊನಾ ಬಿಕ್ಕಟ್ಟಿನ ನಡುವೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ನೆರವಿಗೆ ಬರುವಂತೆ ದೇಶಾದ್ಯಂತದ 2,000ಕ್ಕೂ ಹೆಚ್ಚು ಮಹಿಳಾ ವಕೀಲರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.
ಎರಡು ಸಾವಿರಕ್ಕೂ ಅಧಿಕ ಸಹಿ ಹೊಂದಿರುವ ಪತ್ರವನ್ನು ಅಮಿತ್ ಶಾರಿಗೆ ಕಳುಹಿಸಲಾಗಿದ್ದು, ವಿಪತ್ತು ನಿರ್ವಹಣಾ ಕಾಯ್ದೆಯಡಿ ಹಣಕಾಸಿನ ನೆರವು ನೀಡಲು ಹಾಗೂ ವರ್ಚುವಲ್ ನ್ಯಾಯಾಲಯಗಳ ಮೂಲಸೌಕರ್ಯ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪತ್ರದ ಪ್ರತಿಯನ್ನು ಪ್ರಧಾನಿ ಕಚೇರಿ, ಕಾನೂನು ಸಚಿವರು ಮತ್ತು ಹಣಕಾಸು ಸಚಿವರಿಗೆ ಕೂಡ ಕಳುಹಿಸಲಾಗಿದೆ.
ಜುಲೈ 21ರಂದು ಸಹಿ ಅಭಿಯಾನವನ್ನು ಪ್ರಾರಂಭಿಸಿದ ವಕೀಲರು, 40 ಗಂಟೆಗಳ ಅವಧಿಯಲ್ಲೇ ಎರಡು ಸಾವಿರಕ್ಕೂ ಹೆಚ್ಚು ಸಹಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ಹಿರಿಯ ವಕೀಲೆ ಮೀರಾ ಖಡಕ್ಕರ್ ಮತ್ತು ಅರ್ಚನಾ ಪಾಠಕ್ ದಾವೆ ಸಹ ಸಹಿ ಹಾಕಿದ್ದರು. ಜುಲೈ 22ರಂದು ಸುಪ್ರೀಂಕೋರ್ಟ್ ಸುಮೋಟೊ ಆಧಾರದ ಮೇಲೆ ಯೂನಿಯನ್ ಆಫ್ ಇಂಡಿಯಾ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇತರರಿಗೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.
ಅನ್ಲಾಕ್ ಸಮಯದಲ್ಲೂ ಸಹ ಪ್ರಮುಖ ಕೇಸ್ಗಳ ವಿಚಾರಣೆಗಳನ್ನು ಮಾತ್ರ ಕೋರ್ಟ್ ನಡೆಸುತ್ತಿದೆ. ಹೆಚ್ಚಿನದಾಗಿ ವರ್ಚುವಲ್ ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಲ್ಯಾಪ್‌ಟಾಪ್, ಸ್ಕ್ಯಾನರ್‌ಗಳು, ವೈ-ಫೈ ಸೇರಿ ಇದಕ್ಕೆ ಅವಶ್ಯಕವಿರುವ ಮೂಲಸೌಕರ್ಯದ ಕೊರತೆಯಿದೆ ಎಂದು ಮಹಿಳಾ ವಕೀಲರು ಆರೋಪಿಸಿದ್ದಾರೆ.