ಇಂಫಾಲ್(ಮಣಿಪುರ): ಶುಕ್ರವಾರ ಮಣಿಪುರದ ಕಾಮ್ಜಾಂಗ್ ಜಿಲ್ಲೆಯ ಕಸೋಮ್ ಖುಲ್ಲೆನ್ ನಲ್ಲಿ ಅಸ್ಸೋಂ ರೈಫಲ್ಸ್ (ಎಆರ್) ಸಿಬ್ಬಂದಿಯನ್ನು ಗ್ರಾಮಕ್ಕೆ ಪ್ರವೇಶಿಸದಂತೆ ಹಲವಾರು ಮಹಿಳೆಯರು ತಡೆದಿದ್ದು, ಉದ್ವಿಗ್ನತೆ ಉಂಟಾಗಿದೆ.
ಮೂಲಗಳ ಪ್ರಕಾರ, ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ಸುಳಿವು ಸಿಕ್ಕಿದ್ದ ಹಿನ್ನೆಲೆ ಎಆರ್ ಸೈನಿಕರು ಕಸೋಮ್ ಖುಲ್ಲೆನ್‌ನ ಬುಂಗ್‌ಡುಂಗ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಆದ್ರೆ, ಸೈನಿಕರು ಹಿಂತಿರುಗಬೇಕೆಂದು ಒತ್ತಾಯಿಸಿ ಮಹಿಳೆಯರು ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ರು.
ಈಗಾಗಲೇ ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನರು ಮಾನಸಿಕವಾಗಿ ತೊಂದರೆಗೊಳಗಾಗಿರುವಾಗ ಈ ಪ್ರದೇಶದಲ್ಲಿ ಹೆಚ್ಚುವರಿ ಸೈನಿಕರ ಪಡೆಗಳನ್ನು ನಿಯೋಜಿಸುವುದು ನಮಗಿಷ್ಟವಿಲ್ಲ ಎಂದು ಮಹಿಳಾ ಪ್ರತಿಭಟನಾಕಾರರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪರಿಸ್ಥಿತಿಯ ಕುರಿತು ಮಾಧ್ಯಮಗಳಿಗೆ ತಿಳಿಸಿದ ಭದ್ರತಾ ಪಡೆಯ ಅಧಿಕಾರಿಯೊಬ್ಬರು, ಈಗಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ, ನಾವು ನಾಗರಿಕರಿಗೆ ಹಾನಿ ಉಂಟುಮಾಡುವ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಎನ್ಎಸ್ಸಿಎನ್ (ಐಎಂ) ಆ ಪ್ರದೇಶದಲ್ಲಿ ಶಿಬಿರ ಹೂಡಲಿದೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಲಾಕ್ಡೌನ್ ಅಥವಾ ಯಾವುದೇ ಪರಿಸ್ಥಿತಿ ಇದ್ದರೂ ಉಗ್ರರ ಅಟ್ಟಹಾಸ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ತಡೆಯುವುದು ನಮ್ಮ ಕರ್ತವ್ಯ ಎಂದಿದ್ದಾರೆ.