ಕೋಲ್ಕತಾ (ಪಶ್ಚಿಮ ಬಂಗಾಳ): ರಾಜ್ಯದ ಐಡಿ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಪೋಸ್ಟ್ ಮಾಡಿದ ಆರೋಪದ ಮೇಲೆ 29 ವರ್ಷದ ಮಹಿಳೆಯನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತಾ ಸೈಬರ್ ಅಪರಾಧ ವಿಭಾಗಕ್ಕೆ ರಾಜ್ಯ ಆರೋಗ್ಯ ಇಲಾಖೆ ಸಲ್ಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೆಲಿಯಘಾಟಾದ ಐಡಿ ಆಸ್ಪತ್ರೆ ವೈದ್ಯರ ಬಗ್ಗೆ ನಕಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ರೀಮಾ ಭೌಮಿಕ್ ಅವರನ್ನು ಬಂಧಿಸಲಾಗಿದೆ ಎಂದು ಕೋಲ್ಕತಾ ಪೊಲೀಸ್ ಜಂಟಿ ಆಯುಕ್ತ (ಅಪರಾಧ) ಮುರಳೀಧರ್ ಶರ್ಮಾ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (1) (ಬಿ) / 2, ಮಾಹಿತಿ ತಂತ್ರಜ್ಞಾನ ಕಾಯ್ದೆ 200ರ ಸೆಕ್ಷನ್ 66ರ ಅಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯದ ಯಾವುದೇ ವೈದ್ಯರು ಅಥವಾ ಆರೋಗ್ಯ ಇಲಾಖೆ ಸಿಬ್ಬಂದಿ ಈ ಸೋಂಕಿಗೆ ತುತ್ತಾಗಿಲ್ಲ ಎಂದು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.