ನವದೆಹಲಿ: ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದ 41 ವರ್ಷದ ಮಹಿಯೊಬ್ಬರ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ನಾಲ್ವರ ಪ್ರಾಣ ಉಳಿಸಿದ್ದಾರೆ.
ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಘಾಜಿಯಾಬಾದ್ ಇಂದಿರಾಪುರ ನಿವಾಸಿ ಸಾವನ್ನಪ್ಪಿದ್ದರು. ಈ ವೇಳೆ ಅವರ ಮೃತದೇಹವನ್ನು ಹೃದಯ ಕಸಿಗಾಗಿ ಕೇವಲ 18 ನಿಮಿಷಗಳಲ್ಲಿ 23 ಕಿ.ಮೀ.ಗಿಂತಲೂ ಅಧಿಕ ದೂರ ಗ್ರೀನ್ ಕಾರಿಡಾರ್ ಮೂಲಕ ಗಾಜಿಯಾಬಾದ್‌ನಿಂದ ದೆಹಲಿಗೆ ಸಾಗಿಸಲಾಯಿತು. ತಕ್ಷಣವೇ ದೀರ್ಘಕಾಲದ ಹೃದಯ ರೋಗದಿಂದ ಬಳಲುತ್ತಿದ್ದವರಿಗೆ ಆಕೆಯ ಹೃದಯ ಕಸಿ ಮಾಡಲಾಗಿದೆ.
ಮಹಿಳೆಯ ಪಿತ್ತಜನಕಾಂಗ ಮತ್ತು ಎರಡು ಮೂತ್ರಪಿಂಡಗಳನ್ನು ಪ್ರತ್ಯೇಕ ಕಸಿ ವಿಧಾನಗಳಲ್ಲಿ ಬಳಸಲಾಯಿತು.
ಅಂಗಾಂಗ ದಾನ ಮಾಡಿದ ಮಹಿಳೆಯನ್ನು ಡಿಸೆಂಬರ್ 19ರಂದು ತಲೆನೋವು ಮತ್ತು ಇತರ ಆರೋಗ್ಯ ಸಮಸ್ಯೆಯ ಕಾರಣ, ವೈಶಾಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಓದಿ: ಕೋವಿಡ್ -19 ಎಫೆಕ್ಟ್ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆದಾಯದಲ್ಲಿ ಭಾರಿ ಇಳಿಕೆ
ಅನ್ಯೂರಿಸ್ಮಲ್ ರಕ್ತಸ್ರಾವದಿಂದ ಆಕೆ ಬಳಲುತ್ತಿದ್ದರು (ಮೆದುಳಿನ ಹಿಗ್ಗಿದ ರಕ್ತನಾಳಗಳಿಂದ ರಕ್ತಸ್ರಾವ). ತಜ್ಞ ವೈದ್ಯರ ತಂಡದ ನಿರಂತರ ಪ್ರಯತ್ನಗಳ ಹೊರತಾಗಿಯೂ, ಆಕೆಯ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಗುರುವಾರ ಆಕೆಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಆಸ್ಪತ್ರೆ ತಿಳಿಸಿದೆ.
ಸಾವಿನ ಬಳಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಆಕೆಯ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಕೊಂಡಿದ್ದಾರೆ. ಬಳಿಕ ಹೃದಯ, ಮೂತ್ರಪಿಂಡ ಮತ್ತು ಯಕೃತ್ತು ಕಸಿ ಮಾಡಲಾಯಿತು. ಗಾಜಿಯಾಬಾದ್ ಮತ್ತು ದೆಹಲಿಯ ಪೊಲೀಸರು ಮ್ಯಾಕ್ಸ್ ಆಸ್ಪತ್ರೆ, ವೈಶಾಲಿ ಮತ್ತು ಸಾಕೆತ್‌ನ ಮ್ಯಾಕ್ಸ್ ಆಸ್ಪತ್ರೆಗಳ ನಡುವೆ ಅಂಗಾಂಗ ಕಸಿಗಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.