ಬಕ್ಸರ್: ಬಿಹಾರ್ ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. ಐದು ವರ್ಷದ ಮಗುವನ್ನು ಕ್ರೂರವಾಗಿ ಕೊಲೆ ಮಾಡಿ, ಆ ಕಂದನ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೌರ್ಜನ್ಯ ಮೆರೆದಿರುವ ಘಟನೆ ಬಕ್ಸರ್ ಜಿಲ್ಲೆಯಲ್ಲಿ ನಡೆದಿದೆ.
ಮುರಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನನ್ನ ಮಗಳು ಮತ್ತು ಮೊಮ್ಮಗ ಬ್ಯಾಂಕ್ಗೆ ಹೋಗುತ್ತಿರುವಾಗ ಕಾಲುವೆ ಬಳಿ ಇಬ್ಬರು ವ್ಯಕ್ತಿಗಳು ಅವರನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಬಳಿಕ ಏಳು ಜನರು ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಮಗು ಅಳುವಿನ ಶಬ್ದ ಗ್ರಾಮಸ್ಥರಿಗೆ ತಿಳಿಯುತ್ತೆಂದು ಕೈ-ಕಾಲು ಕಟ್ಟಿ ಕಾಲುವೆ ಎಸೆದು ಕೊಲೆ ಮಾಡಿದ್ದಾರೆ ಎಂದು ಸಂತ್ರಸ್ತೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಲುವೆಯಲ್ಲಿ ಮಗುವಿನ ಮೃತದೇಹ ದೊರೆತ್ತಿದ್ದು, ಮೂರ್ಛೆ ಹೋಗಿದ್ದ ಮಹಿಳೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವಿನ ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ಕಳುಹಿಸಿದರು. ಇನ್ನು ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಪಾಟ್ನದ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳಲ್ಲಿ ಇಬ್ಬರನ್ನು ಗುರುತಿಸಿದ ಪೊಲೀಸರು ಒಬ್ಬರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.