ಡೆಹ್ರಾಡೂನ್(ಉತ್ತರಾಖಂಡ್) : ಕೊರೊನಾ ವಿರುದ್ಧ ಹೋರಾಟಕ್ಕೆ 60 ವರ್ಷದ ವೃದ್ಧೆಯೊಬ್ಬರು ತಾವು ವೈಯಕ್ತಿಕವಾಗಿ ಕೂಡಿಟ್ಟಿದ್ದ ಹಣವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ. 10 ಲಕ್ಷ ರೂಪಾಯಿಗಳ ಚೆಕ್‌ನ ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ದೇವಕಿ ಭಂಡಾರಿ ಎಂಬುವರು ಪಿಎಂ ಕೇರ್ಸ್ಗೆ ಹಣ ನೀಡಿದ ಮಹಿಳೆ. 10 ಲಕ್ಷ ರೂ. ಚೆಕ್‌ನ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಆಕೆ ನನಗೆ ದಾನವೀರ ಕರ್ಣ ಹಾಗೂ ರಾಜ ಬಲಿ ಚಕ್ರವರ್ತಿಯನ್ನು ನೆನಪು ಮಾಡಿದ್ದಾರೆ ಎಂದಿದ್ದಾರೆ.
ಜೊತೆಗೆ ''ದೇವಕಿ ಅವರು ದೇಶವನ್ನೇ ತನ್ನ ಕುಟುಂಬವೆಂದೇ ಭಾವಿಸಿದ್ದಾರೆ. ಅವರು ಕೊಟ್ಟಿರುವ ಕೊಡುಗೆ ಎಲ್ಲರಿಗೂ ಮಾದರಿ. ರಾಷ್ಟ್ರ ಕೊರೊನಾ ವಿರುದ್ಧ ಹೋರಾಡಲು ಶಕ್ತಿ ನೀಡಿದ್ದಾರೆ'' ಎಂದಿದ್ದಾರೆ. ದೇವಕಿ ಚಮೋಲಿ ಜಿಲ್ಲೆ ಗೌಚಾರ್ ಪ್ರದೇಶದವರಾಗಿದ್ದಾರೆ. ಅವರ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಈ ದಂಪತಿಗೆ ಮಕ್ಕಳಿರಲಿಲ್ಲ ಎಂದು ತಿಳಿದು ಬಂದಿದೆ.