ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಇದರ ಮಧ್ಯೆ ದುಷ್ಕರ್ಮಿಗಳ ಗುಂಪೊಂದು ನಿನ್ನೆ ರಾತ್ರಿ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ 9:30ರ ಸುಮಾರು 26 ವರ್ಷದ ಪ್ರೀತಿ ಅಹ್ಲವಾತ್ ಮೇಲೆ ರೋಹಿಣಿ ಪ್ರದೇಶದ ಮೆಟ್ರೋ ಸ್ಟೇಷನ್ ಬಳಿ ದುರ್ಘಟನೆ ನಡೆದಿದೆ. ಈ ವೇಳೆ ಕೆಲಸ ಮುಗಿಸಿಕೊಂಡು ಅವರು ಮನೆಗೆ ವಾಪಸ್ ಆಗುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರೀತಿ ಅಹ್ಲಾವತ್ ದೆಹಲಿಯ ಪಾಟ್ಪರ್ಗಂಜ್ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು ಪ್ರೀತಿ ತಲೆಗೆ ಮೂರು ಸುತ್ತ ಗುಂಡು ಹಾರಿಸಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶಂಕಿತರನ್ನ ಗುರುತಿಸಿದ್ದಾಗಿ ಮಾಹಿತಿ ನೀಡಿದ್ದಾರೆ. ಜತೆಗೆ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದಾಗಿ ಎಸ್.ಡಿ ಮಿಶ್ರಾ ಮಾಹಿತಿ ನೀಡಿದ್ದಾರೆ.
2018ರ ಬ್ಯಾಚ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಹರಿಯಾಣದ ಸೊನಿಪತ್ನಲ್ಲಿ ಕಾರ್ಯನಿರ್ವಹಿಸಿದ್ದ ಪ್ರೀತಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಗೆ ವರ್ಗಾವಣೆಗೊಂಡಿದ್ದರು. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಈ ಕೃತ್ಯ ನಡೆದಿರುವುದು ದೆಹಲಿ ಜನರ ನಿದ್ದೆಗೆಡಿಸಿದೆ.