ದೆವಾಸ್ (ಮಧ್ಯಪ್ರದೇಶ): ಅತಿಕ್ರಮಣ ಮಾಡಿದ್ದ ಭೂಮಿ ತೆರವುಗೊಳಿಸಲು ತೆರಳಿದ್ದ ವೇಳೆ ಮಹಿಳೆಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ದೆವಾಸ್ ಜಿಲ್ಲೆಯ ಅಟ್ವಾಸ್ ಗ್ರಾಮದಲ್ಲಿ ನಡೆದಿದೆ.
ಅತಿಕ್ರಮಣ ತೆರವು ಮಾಡಲು ತೆರಳಿದ್ದ ವೇಳೆ ಕಂದಾಯ ಇಲಾಖೆ ತಂಡ ಹಾಗೂ ಗ್ರಾಮಸ್ಥರ ನಡುವೆ ಮಾರಾಮಾರಿ ಸಹ ನಡೆದಿದೆ. ಈ ವೇಳೆ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂಬ ಮಾಹಿತಿ ದೊರೆತಿದೆ.
ಸೋಯಾಬಿನ್ ಬೆಳೆ ಬೆಳೆಯುತ್ತಿದ್ದ ಪ್ರದೇಶಕ್ಕೆ ಕಂದಾಯ ಇಲಾಖೆಯ ತಂಡ ಬುಲ್ಡೋಜರ್ ತೆಗೆದುಕೊಂಡು ಹೋಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದೆ. ಈ ವೇಳೆ ಗ್ರಾಮಸ್ಥರು- ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ನಡೆದ ವಾಗ್ವಾದ ಘರ್ಷಣೆಗೆ ತಿರುಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ:
ಅಟ್ವಾಸ್ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬ ಸದಸ್ಯರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ್ದಾರೆ ಅನ್ನೋದು ಕಂದಾಯ ಇಲಾಖೆ ಅಧಿಕಾರಿಗಳ ವಾದವಾಗಿದೆ. ಸರ್ವೇ ಪ್ರಕಾರ, ಭೂಮಿ ವಶಕ್ಕೆ ಪಡೆದುಕೊಳ್ಳಲು ಬಂದಾಗ ಗ್ರಾಮಸ್ಥರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ಪ್ರಕರಣವನ್ನು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.