ನವದೆಹಲಿ: ಅನೇಕ ಸುತ್ತಿನ ಮಿಲಿಟರಿ ಮಾತುಕತೆಗಳ ನಂತರ ಚೀನಾ ಫಿಂಗರ್ ಪ್ರದೇಶ, ಡೆಪ್ಸಾಂಗ್ ಬಯಲು ಮತ್ತು ಗೋಗ್ರಾದಲ್ಲಿ ತನ್ನ ಸೈನ್ಯವನ್ನು ಹಿಂಪಡೆಯದ ಕಾರಣ, ಭಾರತದ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರು ಸೋಮವಾರ ಸಭೆ ಸೇರಿ ಅಲ್ಲಿನ ಮುಂದಿನ ದಾರಿ ಕುರಿತು ಚರ್ಚಿಸಲಿದ್ದಾರೆ.
ಚೀನಾದ ಸೈನಿಕರು ಮೂರು ತಿಂಗಳಿನಿಂದ ಫಿಂಗರ್ ಪ್ರದೇಶದಲ್ಲಿ ಕ್ಯಾಂಪ್ ಮಾಡಿದ್ದು, ಬಂಕರ್ ಮತ್ತು ಸಾಂಗಾರ್‌ಗಳ ನಿರ್ಮಾಣ ಮಾಡುವ ಮೂಲಕ ಅಲ್ಲಿ ನೆಲೆಯೂರಲು ಚಿಂತಿಸಿದ್ದಾರೆ.
"ಪೂರ್ವ ಲಡಾಕ್ ವಲಯದಲ್ಲಿ ಚೀನಿಯರು ಅನೇಕ ಸ್ಥಳಗಳನ್ನು ಅತಿಕ್ರಮಣ ಮಾಡಿಕೊಂಡಿರುವ ಕುರಿತು ಮತ್ತು ಅದನ್ನು ಎದುರಿಸುವ ಕಾರ್ಯತಂತ್ರವನ್ನು ಮಿಲಿಟರಿ ನಾಯಕರೊಂದಿಗೆ ಉನ್ನತ ರಾಜಕೀಯ ನಾಯಕರು ಚರ್ಚಿಸಲು ನಿರ್ಧರಿಸಿದ್ದಾರೆ" ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಚೀನಿಯರು ಅಲ್ಲಿ ಕಟ್ಟುನಿಟ್ಟಿನ ವಿಧಾನವನ್ನು ಅಳವಡಿಸಿಕೊಂಡಿದ್ದು, ಇದನ್ನು ಹೇಗೆ ಎದುರಿಸಬೇಕೆಂದು ನಾಯಕರು ಚರ್ಚಿಸುವ ನಿರೀಕ್ಷೆಯಿದೆ. ಡೆಪ್ಸಾಂಗ್ ಬಯಲು ಪ್ರದೇಶ, ಫಿಂಗರ್ ಪ್ರದೇಶ, ಗೊಗ್ರಾದಲ್ಲಿ ಭಾರತೀಯ ಪಡೆಗಳೊಂದಿಗೆ ಸುಮಾರು ಮೂರು ತಿಂಗಳ ಕಾಲ ಸಂಘರ್ಷದಲ್ಲಿ ತೊಡಗಿದೆ ಎಂದು ಅವರು ಹೇಳಿದರು.
ಚೀನಿಯರು ಡಿಬಿಒ ವಲಯದಲ್ಲಿ ಫಿರಂಗಿ ಮತ್ತು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಭಾರೀ ಸೈನ್ಯವನ್ನು ಜಮಾಗೊಳಿಸಿದ್ದಾರೆ. ಏಪ್ರಿಲ್-ಮೇ ಕಾಲಮಿತಿಯಿಂದ ಚೀನೀಯರು ಎಲ್‌ಎಸಿಯ ಉದ್ದಕ್ಕೂ ಆಕ್ರಮಣಶೀಲತೆಯನ್ನು ತೋರಿಸುತ್ತಿದ್ದಾರೆ ಮತ್ತು ಕುಂಗ್ರಾಂಗ್ ನಲಾ, ಗಾಲ್ವಾನ್ ಕಣಿವೆ ಇತರ ಪ್ರದೇಶಗಳಲ್ಲಿ ಭಾರತೀಯ ಪ್ರದೇಶಗಳನ್ನಯ ಅತಿಕ್ರಮಣ ಮಾಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ಇತ್ತೀಚೆಗೆ ಹೇಳಿದೆ.
ಜೂನ್. 15 ರಂದು, ಭಾರತೀಯ ಸೇನೆಯು ಗಾಲ್ವಾನ್ ಕಣಿವೆಯ ಪಿಪಿ -14 ಬಳಿ ಚೀನಾದ ಸೈನ್ಯದೊಂದಿಗೆ ಮುಖಾಮುಖಿಯಲ್ಲಿ ತೊಡಗಿದ್ದು, ಇದರಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.