ಹೈದರಾಬಾದ್: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಮುಖ್ಯವಾಗಿ ಹೈದರಾಬಾದ್ ಕೊರೊನಾ ಹಾಟ್ಸ್ಪಾಟ್ ಆಗಿದೆ. ಈ ಹಿನ್ನೆಲೆಯಲ್ಲಿ ನಗರದ ವ್ಯಾಪಾರಿಗಳು ಸ್ವಯಂ ಪ್ರೇರಿತ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.
ಈಗಾಗಲೇ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ಹೇರಿ ಲಾಕ್ಡೌನ್ ಸಡಿಲಿಕೆ ಮಾಡಿದೆ. ಆದರೆ, ನಗರದ ವ್ಯಾಪಾರಸ್ಥರು ಎರಡು ವಾರಗಳ ಕಾಲ ಅಂಗಡಿ ಮುಂಗಟ್ಟುಗಳ ಮುಚ್ಚಿ ಸ್ವಯಂ ಪ್ರೇರಿತ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಇಲ್ಲಿನ ಪ್ರಮುಖ ವ್ಯಾಪಾರ ಕೇಂದ್ರವಾದ ಬೇಗಂ ಬಜಾರ್ ಸಮೀಪದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗಿವೆ ಎಂಬ ಕಾರಣದಿಂದ ವ್ಯಾಪಾರಿಗಳು ಕೆಲವು ದಿನಗಳ ಹಿಂದೆ ವ್ಯಾಪಾರ ವಹಿವಾಟಿನ ಸಮಯವನ್ನು ಕಡಿತಗೊಳಿಸಿದ್ದರು.
ಸಿಕಂದರಾಬಾದ್‌ನ ಜನರಲ್ ಬಜಾರ್‌ನ ಜವಳಿ ವ್ಯಾಪಾರಿಗಳು ಕೆಲವು ದಿನಗಳವರೆಗೆ ವ್ಯವಹಾರವನ್ನು ಸ್ಥಗಿತಗೊಳಿಸಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದ್ದಾರೆ. ಜನರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜವಳಿ ವ್ಯಾಪಾರಸ್ಥರ ಸಂಘ ತಿಳಿಸಿದೆ. ಅಷ್ಟೇ ಅಲ್ಲದೆ, ಕಿರಾಣಿ ಮರ್ಚೆಂಟ್ಸ್ ಅಸೋಸಿಯೇಷನ್ ಸಹ ಬೆಂಬಲ ನೀಡಿದೆ.
ಪ್ರಮುಖ ವಾಣಿಜ್ಯ ಕೇಂದ್ರವಾದ ಟ್ರೂಪ್ ಬಜಾರ್‌ನಲ್ಲಿನ ವ್ಯಾಪಾರಿಗಳು ಇದೇ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚಾರ್ಮಿನಾರ್ ಬಳಿಯ ಐತಿಹಾಸಿಕ ಲಾಡ್ ಬಜಾರ್‌ನಲ್ಲಿನ ವ್ಯಾಪಾರಿಗಳು ಹಾಗೂ ಪಠಾರ್ ಗಟ್ಟಿಯಲ್ಲಿನ ವ್ಯಾಪಾರಿಗಳು ಗುರುವಾರದಿಂದ ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಿದ್ದಾರೆ.
ಇನ್ನು ತೆಲಂಗಾಣ ರಾಜ್ಯದಲ್ಲಿ 10,444 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್ ಒಂದರಲ್ಲಿ ನಿನ್ನೆ 791 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಯ ಕಥೆ ಅಲ್ಲ ಕಳೆದ ಮೂರ್ನಾಲ್ಕು ದಿನಗಳಿಂದ ಸರಾಸರಿ 700 ಕೇಸ್ಗಳು ಹೈದರಾಬಾದ್ ನಗರದಿಂದಲೇ ದಾಖಲಾಗುತ್ತಿವೆ. ಹೀಗಾಗಿ ಮುತ್ತಿನ ನಗರಿ ಜನ ಬೆಚ್ಚಿ ಬಿದ್ದಿದ್ದಾರೆ.