ಪಾಟ್ನಾ: 243 ಕ್ಷೇತ್ರಗಳ ಬಿಹಾರದಲ್ಲಿ ಇಂದು ಕೊನೆ ಹಂತದ ವಿಧಾನಸಭೆ ವೋಟಿಂಗ್ ನಡೆಯುತ್ತಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳುವ ಮೂಲಕ ವಿವಿಧ ಪಕ್ಷಗಳ ಹಣೆಬರಹ ಗೊತ್ತಾಗಲಿದೆ. ಇದರ ಮಧ್ಯೆ ಅಬ್ಬರದ ಪ್ರಚಾರ ನಡೆಸಿರುವ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
ಚುನಾವಣೆ ಘೋಷಣೆಯಾದಾಗಿನಿಂದಲೂ ಅವರು ಬರೋಬ್ಬರಿ 247 ಮೀಟಿಂಗ್, ನಾಲ್ಕು ರೋಡ್ ಶೋ ಹಾಗೂ 12 ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆರ್ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಮಾಹಿತಿ ನೀಡಿದ್ದು, ನಿತ್ಯ ತೇಜಸ್ವಿ ಯಾದವ್ 12ಕ್ಕಿಂತಲೂ ಅಧಿಕ ಮೀಟಿಂಗ್ಗಳಲ್ಲಿ ಭಾಗಿಯಾಗಿದ್ದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ 8 ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಹಾಘಟಬಂಧನ್ ಪರ ಮತಯಾಚನೆ ಮಾಡಿದ್ದು, ಸುರ್ಜೇವಾಲ್ 20 ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಆದರೆ, ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಪ್ರಚಾರದಿಂದ ಹೊರಗುಳಿದಿದ್ದರು.
ಬಿಹಾರ ಸಿಎಂ ನಿತೀಶ್ ಕುಮಾರ್ 160ಕ್ಕಿಂತಲೂ ಅಧಿಕ ಸಭೆಗಳಲ್ಲಿ ಭಾಗಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆರು ಸಭೆಯಲ್ಲಿ ಪ್ರಚಾರ ಮಾಡಿದ್ದು, ಒಟ್ಟು 12 ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ 22, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 19 ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದು, ಇವರ ಜತೆಗೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಅನುರಾಗ್ ಠಾಕೂರ್, ಧರ್ಮೇಂದ್ರ ಪ್ರದಾನ್ ಕೂಡ ಪ್ರಚಾರ ನಡೆಸಿದ್ದಾರೆ.