ನವದೆಹಲಿ: ಇಂದಿನ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಬಗ್ಗೆ ಕಾಂಗ್ರೆಸ್ನ ನಾಯಕರಾದ ಬಿ.ಕೆ. ಹರಿಪ್ರಸಾದ್ ಮತ್ತು ಜಿ. ಸಿ. ಚಂದ್ರಶೇಖರ್ ಸದನದಲ್ಲಿ ಪ್ರಸ್ತಾಪಿಸಿದ್ರು.
ಸದನದಲ್ಲಿ ಮೊದಲಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ತುಂಬಾ ಮಳೆಯಾದ ಪರಿಣಾಮ ಭಾರೀ ನಷ್ಟವಾಗಿದೆ. ಅಲ್ಲದೇ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ರಾಜ್ಯದಲ್ಲಿ 224 ಮಿಮೀ ಮಳೆಯಾಗಿದೆ. ಇದು ದಾಖಲೆಯ ಮಳೆಯಾಗಿದ್ದು, ಕಳೆದ ಹಲವು ವರ್ಷಗಳ ಹಿಂದೆಯಿಂದ ಇಷ್ಟು ಮಳೆಯಾಗಿರಲಿಲ್ಲ. ಉ. ಕರ್ನಾಟಕ ಜಿಲ್ಲೆಗಳಲ್ಲಿ ತುಂಬಾ ಮಳೆಯಾಗಿದ್ದರಿಂದ ತುಂಬಾ ಜನ ನೆಲೆಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ನಮ್ಮ ರಾಜ್ಯಕ್ಕೆ ನೀಡಿರುವ ಪರಿಹಾರ ಧನವೂ ಕಡಿಮೆ ಎಂದರು.
ಇನ್ನು ನಮ್ಮ ದೇಶದ ಪ್ರಧಾನಿ ಮೋದಿ ಅವರು ಬೇರೆಲ್ಲಾ ವಿಷಯಕ್ಕೆ ಟ್ವೀಟ್ ಮಾಡುತ್ತಾರೆ. ಆದ್ರೆ ನಮ್ಮ ಕರ್ನಾಟಕ ಪ್ರವಾಹ ಕುರಿತು ಅವರು ಯಾವುದೇ ಟ್ವೀಟ್ ಮಾಡಿಲ್ಲ ಎಂದರು. ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ, ಇಲ್ಲಿ ರಾಜಕೀಯ ಚರ್ಚೆಗಳು ಬೇಡ. ನಿಮ್ಮ ಸಮಸ್ಯೆಗಳನ್ನು ಮಾತ್ರ ಹೇಳಿ ಎಂದು ತಾಕೀತು ಮಾಡಿದ್ರು.
ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಜಿ. ಸಿ. ಚಂದ್ರಶೇಖರ್ ಕೂಡ ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡಿದ್ರು. ಅದರಲ್ಲೂ ಅವರಿಗೆ ಕನ್ನಡದಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು.