ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆದಿದ್ದು, ಡಿಸೆಂಬರ್ 25 ಹಾಗೂ 27ರ ನಡುವೆ ಎಲ್ಲಾ ಟೋಲ್ ಪ್ಲಾಜಾಗಳಿಗೆ ಮುತ್ತಿಗೆ ಹಾಕುವುದಾಗಿ ಹಾಗೂ ಮನ್ ಕಿ ಬಾತ್ ವೇಳೆ ಪಾತ್ರೆಗಳನ್ನು ಬಡಿಯುವುದಾಗಿ ಸರ್ಕಾರಕ್ಕೆ ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ರೈತ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಿಂಘು ಗಡಿಯಲ್ಲಿ ಭಾನುವಾರ ಶ್ರದ್ಧಾಂಜಲಿ ದಿವಸ್ ಆಚರಿಸಿ ಮಾತನಾಡಿದ ರೈತ ಸಂಘಟನೆಗಳ ಮುಖಂಡರು ಡಿಸೆಂಬರ್ 27 ರಂದು ಪ್ರಧಾನಿ ಮೋದಿ ಅವರು 'ಮನ್ ಕಿ ಬಾತ್' ನಲ್ಲಿ ಮಾತನಾಡಲಿದ್ದಾರೆ. ಈ ವೇಳೆ ಎಲ್ಲರೂ ತಮ್ಮ ಮನೆಗಳಲ್ಲಿನ ಪಾತ್ರೆಗಳನ್ನು ಬಡಿಯಬೇಕು. ಈ ಮೂಲಕ ನಮಗೆ ಬೆಂಬಲ ಸೂಚಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಓದಿ: ಸಿಂಘು ಗಡಿಯಿಂದ ಮನೆಗೆ ಮರಳಿದ ಯುವ ರೈತ ವಿಷ ಸೇವಿಸಿ ಆತ್ಮಹತ್ಯೆ
ರೈತ ಪ್ರತಿಭಟನೆಯನ್ನು ಬೆಂಬಲಿಸದ ಯಾವುದೇ ಎನ್ಡಿಎ ಮೈತ್ರಿಕೂಟದ ಪಕ್ಷವನ್ನು ಬಹಿಷ್ಕರಿಸಲು ಇದೇ ವೇಳೆ ರೈತ ಮುಖಂಡರು ನಿರ್ಧರಿಸಿದ್ದಾರೆ. ಇದೇ ವೇಳೆ ಮಾತನಾಡಿದ ರೈತ ಮುಖಂಡ ಜಸ್ಬೀರ್ ಸಿಂಗ್ ಸರ್ಕಾರವು ರೈತರನ್ನು ಕೆಣಕಲು ಪ್ರಯತ್ನಿಸುತ್ತಿದೆ. ಭಾರಿ ಚಳಿಯಿರುವ ರಾತ್ರಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ರೈತರ ಬಗ್ಗೆ ಯೋಚನೆ ನಡೆಸಬೇಕು. ಆದರೆ ನಮ್ಮನ್ನೇ ಸರ್ಕಾರ ದೂಷಿಸುತ್ತಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ತಮ್ಮ ಅಹಂ ಅನ್ನು ಕೈಬಿಡುವಂತೆ ಕೃಷಿ ಸಚಿವರು ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ರೈತ ಮುಖಂಡರು ಹೇಳಿದ್ದಾರೆ. ಕೆಲವು ಕಲಾವಿದರು ರೈತ ಹೋರಾಟಕ್ಕೆ ಬೆಂಬಲ ನೀಡಿದ್ದು, ಅಂತಹ ವ್ಯಕ್ತಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದೆ. ಇದು ಸರ್ಕಾರದ ಕುಮ್ಮಕ್ಕು ಎಂದು ಆರೋಪಿಸಿದ್ದಾರೆ. ಇದರೊಂದಿಗೆ ಮಾಧ್ಯಮಗಳೂ ರೈತ ಪ್ರತಿಭಟನೆಯನ್ನು ಬೆಂಬಲಿಸಲು ಮನವಿ ಮಾಡಿದರು.
ಇಂದಿಗೆ 25ನೇ ದಿನಕ್ಕೆ ರೈತ ಹೋರಾಟ ಕಾಲಿಟ್ಟಿದ್ದು, ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಈವರೆಗೂ ಅನೇಕ ಸಂಧಾನ ಸಭೆಗಳನ್ನು ನಡೆಸಲಾಗಿದ್ದು, ಕೇಂದ್ರ ಸರ್ಕಾರ ಹಾಗೂ ರೈತರು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.