ಕೊಚ್ಚಿ (ಕೇರಳ): ಕೇರಳದಲ್ಲಿ ಘೋರ ಅಂತ್ಯ ಕಂಡ ಗರ್ಭಿಣಿ ಆನೆಯ ಬಾಯಿಯಲ್ಲಿ ಸ್ಫೋಟಕಗಳಿಂದ ದೊಡ್ಡ ಗಾಯಗಳಾಗಿದ್ದವು. ಹೀಗಾಗಿ ಸುಮಾರು ಎರಡು ವಾರಗಳವರೆಗೆ ಆನೆ ಏನನ್ನೂ ತಿನ್ನಲು ಸಾಧ್ಯವಾಗಿಲ್ಲ, ಇದರಿಂದಾಗಿ ಕುಸಿದುಬಿದ್ದು ನದಿಯಲ್ಲಿ ಮುಳುಗಿದೆ ಎಂದು ಮರಣೋತ್ತರ ವರದಿ ತಿಳಿಸಿದೆ.
ಆನೆಯ ಬಾಯಿಯಲ್ಲಿ ಸ್ಫೋಟ ಸಂಭವಿಸಿದ್ದರಿಂದ ಗಾಯಗಳಾಗಿದ್ದವು. ತೀವ್ರ ನೋವು ಮತ್ತು ಸಂಕಟದಿಂದಾಗಿ ಸುಮಾರು ಎರಡು ವಾರಗಳವರೆಗೆ ಆಹಾರ ಮತ್ತು ನೀರು ಸೇವನೆ ಮಾಡಿಲ್ಲ. ತೀವ್ರವಾದ ಕ್ಷೀಣತೆ ಮತ್ತು ದೌರ್ಬಲ್ಯ ನೀರಿನಲ್ಲಿ ಕುಸಿದು ಮುಳುಗಲು ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನದಿಯಲ್ಲಿ ಮುಳುಗಿದ ನಂತರ ನೀರಿನ ಸೇವನೆ ಶ್ವಾಸಕೋಶ ವೈಫಲ್ಯಕ್ಕೆ ಕಾರಣವಾಗಿದ್ದು, ಇದು ಆನೆಯ ಸಾವಿಗೆ ತಕ್ಷಣದ ಕಾರಣವಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಮೃತದೇಹದ ಯಾವುದೇ ಭಾಗದಲ್ಲಿ ಗುಂಡು, ಉರುಳು ಅಥವಾ ಯಾವುದೇ ಲೋಹ ಅಥವಾ ವಿದೇಶಿ ವಸ್ತು ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ.
ಪ್ರಬಲವಾದ ಪಟಾಕಿಗಳಿಂದ ತುಂಬಿದ ಅನಾನಸ್ ಹಣ್ನನ್ನು ಆನೆ ಸೇವಿಸಿದೆ ಎಂದು ಶಂಕಿಸಲಾಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿತ್ತು.
ಆನೆಯ ಕೆಳ ದವಡೆಯಲ್ಲಿ ಗಾಯಗಳಾಗಿದ್ದು, ಪಟಾಕಿ ತುಂಬಿದ್ದ ಅನಾನಸ್ ಹಣ್ಣು ತಿಂದಿದ್ದರಿಂದಲೇ ಹೀಗಾಗಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಸಾಧ್ಯತೆ ಇರಬಹುದು ಎಂದು ಊಹಿಸಲಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆ ಹೇಳಿದೆ. ಮನ್ನಾರ್ಕಾಡ್ ಅರಣ್ಯ ವಿಭಾಗದ ಅಧೀನದಲ್ಲಿರುವ ತಿರುವಿಜಾಮ್ಕುನ್ನು ಅರಣ್ಯ ಕೇಂದ್ರದಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆನೆ ಗರ್ಭಿಣಿ ಆಗಿತ್ತು ಎಂದು ತಿಳಿದುಬಂದಿದೆ.